ಶಾಸಕ ನಿಂಗಯ್ಯರ ರಾಜೀನಾಮೆ ಕೇಳುವ ನೈತಿಕ ಹಕ್ಕು ಬಿಜೆಪಿಗಿಲ್ಲ: ಆದರ್ಶ್ ಬಾಳೂರು

ಬಣಕಲ್, ಸೆ.17: ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯನವರಿಗೆ ಶಾಸಕ ಬಿ.ಬಿ.ನಿಂಗಯ್ಯನವರ ರಾಜಿನಾಮೆ ಕೇಳುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಜೆಡಿಎಸ್ ಯುವ ಜನತಾದಳದ ಮೂಡಿಗೆರೆ ಕ್ಷೇತ್ರಸಮಿತಿ ಕಾರ್ಯಾಧ್ಯಕ್ಷ ಆದರ್ಶ್ ಬಾಳೂರು ತಿಳಿಸಿದ್ದಾರೆ.
ಅವರು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಇತ್ತೀಚೆಗೆ ಶಾಸಕ ಬಿ.ಬಿ.ನಿಂಗಯ್ಯ ರಾಜಿನಾಮೆ ನೀಡುವಂತೆ ಒತ್ತಾಯಿಸಿ ಪತ್ರಿಕಾ ಹೇಳಿಕೆ ನೀಡಿದ್ದಕ್ಕೆ ಭಾನುವಾರ ಹೇಳಿಕೆ ಮೂಲಕ ಪ್ರತಿಕ್ತಿಯಿಸಿದ್ದಾರೆ. ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ. ಕಳಸ ಸದ್ಯದಲ್ಲೇ ತಾಲೂಕು ಕೇಂದ್ರವಾಗಲಿದೆ. ಸಂಸದೆ ಶೋಭಾ ಕರಂದ್ಲಾಜೆ ಈ ಕ್ಷೇತ್ರದ ಸಂಸದೆಯಾಗಿದ್ದು ಕಳಸ ತಾಲೂಕು ಕೇಂದ್ರ ಮಾಡುವ ಕುರಿತಾದ ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ ಎಂದು ದೂರಿದ್ದಾರೆ.
ಕಳಸ ತಾಲೂಕು ಕೇಂದ್ರವನ್ನಾಗಿ ಮಾಡಲು ಶಾಸಕ ಬಿ.ಬಿ.ನಿಂಗಯ್ಯ ನೇತೃತ್ವದಲ್ಲಿ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಳಸ ತಾಲೂಕು ಕೇಂದ್ರವನ್ನಾಗಿ ಮಾಡಲು ಮನವಿ ಮಾಡಿಕೊಳ್ಳಲಾಗಿತ್ತು. ಮಾಜಿ ಪ್ರಧಾನಿ ದೇವೇಗೌಡರನ್ನೂ ಬೇಟಿ ನೀಡಿ ದಾಖಲಾತಿಗಳನ್ನು ನೀಡಿ ಕಳಸ ತಾಲೂಕು ಕೇಂದ್ರವನ್ನಾಗಿ ಮಾಡುವ ಅಗತ್ಯತೆಯನ್ನು ಮನವರಿಕೆ ಮಾಡಿಕೊಡಲಾಗಿತ್ತು ಎಂದಿದ್ದಾರೆ.
ದೇವೇಗೌಡರು ಸಿಎಂ ಸಿದ್ದರಾಮಯ್ಯರನ್ನು ಬೇಟಿ ಮಾಡಿ, ವಿಸ್ತೀರ್ಣ ಮತ್ತು ಜನಸಂಖ್ಯೆ ಆಧಾರದಲ್ಲಿ ಕಳಸವನ್ನು ತಾಲೂಕು ಕೇಂದ್ರವ್ನನಾಗಿ ಮಾಡಲು ಆಗ್ರಹಿಸಿದ್ದರು. ಮುಖ್ಯಮಂತ್ರಿಗಳು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಂದ ಕಳಸಕ್ಕೆ ಸಂಬಂಧಿಸಿದ ವರದಿ ತರಿಸಿಕೊಂಡಿದ್ದು ಎಲ್ಲಾ ಆಡಳಿತಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ನವೆಂಬರ್ 1ರಂದು ಅಧೀಕೃತವಾಗಿ ಕಳಸ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗುವ ಎಲ್ಲಾ ಸಾದ್ಯತೆಗಳಿವೆ ಎಂದು ತಿಳಿಸಿದ್ದಾರೆ.







