ಆಹಾರ, ವಸತಿಯ ಕೊರತೆ: ರೊಹಿಂಗ್ಯಾ ನಿರಾಶ್ರಿತರು ಅಪಾಯದಲ್ಲಿ
ವಿಶ್ವಸಂಸ್ಥೆಯ ನೆರವು ಏಜೆನ್ಸಿ ಎಚ್ಚರಿಕೆ

ಕಾಕ್ಸ್‌ಬಝಾರ್(ಬಾಂಗ್ಲಾ), ಸೆ.17: ನೆರೆಯ ಮ್ಯಾನ್ಮಾರ್‌ನಲ್ಲಿ ಸೈನಿಕರು ನಡೆಸುತ್ತಿರುವ ಹತ್ಯಾಕಾಂಡದಿಂದ ಪಾರಾಗಲು ಬಾಂಗ್ಲಾ ದೇಶಕ್ಕೆ ಪ್ರತಿ ದಿನವೂ ಸಾವಿರಾರು ಸಂಖ್ಯೆಯಲ್ಲಿ ವಲಸೆ ಬರುತ್ತಿರುವ ರೊಹಿಂಗ್ಯಾ ನಿರಾಶ್ರಿತರು ಆಹಾರ, ಆಶ್ರಯ ಹಾಗೂ ನೀರಿನ ತೀವ್ರ ಅಭಾವದಿಂದಾಗಿ ಸಾವನ್ನಪ್ಪುವ ಸಾಧ್ಯತೆಯಿದೆಯೆಂದು ವಿಶ್ವಸಂಸ್ಥೆಯ ನೆರವು ಏಜೆನ್ಸಿ ರವಿವಾರ ಎಚ್ಚರಿಕೆ ನೀಡಿದೆ.
ಬಾಂಗ್ಲಾಕ್ಕೆ ಗುಳೆ ಬಂದಿರುವ ಸಾವಿರಾರು ರೊಹಿಂಗ್ಯಾ ಮುಸ್ಲಿಮರು ಹಸಿವು, ಆಯಾಸದಿಂದ ನರಳುತ್ತಿದ್ದಾರೆ. ಆಹಾರ ನೀರಿಲ್ಲದೆ ಅವರು ಪರಿತಪಿಸುತ್ತಿದ್ದಾರೆಂದು ಜಾಗತಿಕ ನೆರವು ಸಂಸ್ಥೆ ‘ಸೇವ್ ದಿ ಚಿಲ್ಡ್ರನ್’ನ ನಿರ್ದೇಶಕ ಮಾರ್ಕ್ ಪಿಯರ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. “ರೊಹಿಂಗ್ಯಾಗಳಿಗೆ ಆಹಾರ, ಆಶ್ರಯ, ನೀರು ಹಾಗೂ ನೈರ್ಮಲ್ಯವನ್ನು ಒದಗಿಸಲು ಸಾಧ್ಯವಾಗಿಲ್ಲವೆಂದು ನಾನು ಭಾವಿಸುತ್ತೇನೆ. ರೊಹಿಂಗ್ಯಾ ಕುಟುಂಬಗಳಿಗೆ ಈ ಮೂಲಭೂತ ಆವಶ್ಯಕತೆಗಳನ್ನು ಒದಗಿಸಲು ಸಾಧ್ಯವಾಗದೆ ಇದ್ದಲ್ಲಿ ಅವರ ಯಾತನೆಯು ಇನ್ನೂ ಘೋರವಾಗಲಿದೆ ಹಾಗೂ ಹಲವಾರು ಜೀವಗಳು ಬಲಿಯಾಗಲಿವೆ” ಎಂದು ಪಿಯರ್ಸ್ ಎಚ್ಚರಿಕೆ ನೀಡಿದ್ದಾರೆ.
ನಿರಾಶ್ರಿತರಿಗೆ ಶಾಲೆಗಳಲ್ಲಿ ವಸತಿ ಒದಗಿಸಲು ಮಾನವಹಕ್ಕು ತಜ್ಞರ ಆಗ್ರಹ
ಕುಂಭದ್ರೋಣ ಮಳೆಯಿಂದಾಗಿ ರೊಹಿಂಗ್ಯಾಗಳು ನೆಲೆಸಿರುವ ನಿರಾಶ್ರಿತ ಶಿಬಿರಗಳು ನೆರೆಪೀಡಿತವಾಗಿರುವುದರಿಂದ ಅವರಿಗೆ ತಾತ್ಕಾಲಿಕವಾಗಿ ಸ್ಥಳೀಯ ಶಾಲೆಗಳಲ್ಲಿ ವಸತಿ ಸೌಕರ್ಯವನ್ನು ಒದಗಿಸಬೇಕೆಂದು ಮಾನವಹಕ್ಕುಗಳ ತಜ್ಞರೊಬ್ಬರು ರವಿವಾರ ಬಾಂಗ್ಲಾ ಸರಕಾರವನ್ನು ಆಗ್ರಹಿಸಿದ್ದಾರೆ. ಇದಕ್ಕಾಗಿ ಮೂರು ದಿನಗಳ ಕಾಲ ಶಾಲೆಯನ್ನು ಮುಚ್ಚುಗಡೆಗೊಳಿಸಬೇಕೆಂದು ಅವರ ಆಗ್ರಹಿಸಿದ್ದಾರೆ. ನೆರೆಪೀಡಿತ ರೊಹಿಂಗ್ಯಾ ನಿರಾಶ್ರಿತರು ರಸ್ತೆಬದಿಗಳಲ್ಲಿ ಹಾಗೂ ತೆರೆದ ಜಾಗಗಳಲ್ಲಿ ವಾಸವಾಗಿದ್ದು, ಇದರಿಂದ ಅವರ ಸಮಸ್ಯೆಗಳು ಇನ್ನಷ್ಟು ವಿಷಮಿಸಲಿದೆಯೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ವಿಶ್ವಸಂಸ್ಥೆಗೆ ಆಗಮಿಸಿದ ಶೇಖ್ ಹಸೀನಾ
ಈ ಮಧ್ಯೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರವಿವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್‌ಗೆ ಆಗಮಿಸಿದ್ದಾರೆ. ಅಧಿವೇಶನದಲ್ಲಿ ಅವರು ರೊಹಿಂಗ್ಯಾ ನಿರಾಶ್ರಿತರಿಗೆ ನೆರವನ್ನು ವಿಸ್ತರಿಸುವಂತೆ ವಿಶ್ವಸಮುದಾಯವನ್ನು ಆಗ್ರಹಿಸಲಿದ್ದಾರೆ.
ಮಿಲಿಟರಿ ಆಡಳಿತವಿರುವ ಮ್ಯಾನ್ಮಾರ್‌ನ ಸೇನಾವರಿಷ್ಠ ಜನರಲ್ ಮಿನ್ ಆಂಗ್ ಹ್ಲಾಯಿಂಗ್, ರೊಹಿಂಗ್ಯಾ ಬಿಕ್ಕಟ್ಟಿಗೆ ಸಂಬಂಧಿಸಿ ಏಕೀಕೃತ ನಿಲುವನ್ನು ತಾಳುವಂತೆ ವಿಶ್ವಸಮುದಾಯವನ್ನು ಆಗ್ರಹಿಸಿದ್ದಾರೆ. ಆದರೆ ಯಾವುದೇ ಸಂಧಾನ ಮಾತುಕತೆಗೆ ಮುಂದಾಗುವ ಯಾವುದೇ ಸೂಚನೆಯನ್ನು ಅವರು ನೀಡಿಲ್ಲ.







