ಸೈಂಟ್‌ಲೂಯಿಸ್ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ಕೊಲೆ ಆರೋಪಿ ಬಿಳಿಯ ಪೊಲೀಸ್ ಅಧಿಕಾರಿ ದೋಷಮುಕ್ತಿಗೆ ಆಕ್ರೋಶ

ಸೈಂಟ್‌ಲೂಯಿಸ್,ಸೆ.17: ಕರಿಯ ಜನಾಂಗದ ವ್ಯಕ್ತಿಯ ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದ ಬಿಳಿ ಜನಾಂಗೀಯ ಪೊಲೀಸ್ ಅಧಿಕಾರಿಯನ್ನು ದೋಷಮುಕ್ತಿಗೊಳಿಸಿದ್ದನ್ನು ವಿರೋಧಿಸಿ ಮಿಸ್ಸೌರಿ ರಾಜ್ಯದ ಸೈಂಟ್ ಲೂಯಿಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಶನಿವಾರ ಹಿಂಸಾಚಾರಕ್ಕೆ ತಿರುಗಿದೆ.
ಡೆಲ್ಮಾರ್ ಲೂಪ್ ಉಪನಗರದಲ್ಲಿ ಉದ್ರಿಕ್ತ ಪ್ರತಿಭಟನಕಾರರ ಗುಂಪೊಂದು ಅಂಗಡಿಮುಂಗಟ್ಟೆಗಳ ಕಿಟಕಿಗಾಜುಗಳನ್ನು ಒಡೆಯಿತಲ್ಲದೆ, ಪೊಲೀಸರತ್ತ ಇಟ್ಟಿಗೆ ಮತ್ತಿತರ ಸಾಮಾಗ್ರಿಗಳನ್ನು ಎಸೆದು, ದಾಂಧಲೆ ನಡೆಸಿತು.
ತಕ್ಷಣವೇ ಪೊಲೀಸರು ಕಾರ್ಯಾಚರಣೆ ನಡೆಸಿ, ಗಲಭೆಯನ್ನು ನಿಯಂತ್ರಿಸಿದರು, ಘಟನೆಗೆ ಸಂಬಂಧಿಸಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಶನಿವಾರ ಬೆಳಗ್ಗೆ ಅಧಿಕ ಸಂಖ್ಯೆಯ ಕರಿಯಜನಾಂಗೀಯರು ಸೇರಿದಂತೆ ನೂರಾರು ಮಂದಿ ಸೈಂಟ್‌ಲೂಯಿಸ್‌ನ ಪ್ರಮುಖ ರಸ್ತೆಗಳಲ್ಲಿ ಶಾಂತಿಯುತ ಮೆರವಣಿಗೆ ನಡೆಸಿ ‘ಕರಿಯರ ಜೀವಗಳಿಗೂ ಬೆಲೆಯಿದೆ’ ಹಾಗೂ ‘ನಮ್ಮ ಸ್ವಾತಂತ್ರಕ್ಕಾಗಿ ಹೋರಾಡುವುದು ನಮ್ಮ ಕರ್ತವ್ಯ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
2011ರ ಡಿಸೆಂಬರ್‌ನಲ್ಲಿ ಆ್ಯಂಥನಿ ಲಾಮಾರ್ ಸ್ಮಿತ್ ಎಂಬ ಕರಿಯ ಜನಾಂಗೀಯನ ಕಾರನ್ನು ಬೆನ್ನಟ್ಟಿದ ಬಳಿ ಆತನನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಮಾಜಿ ಪೊಲೀಸ್ ಅಧಿಕಾರಿ ಜೇಸನ್ ಸ್ಟೋಕ್ಲಿಯನ್ನು ದೋಷಮುಕ್ತಿಗೊಳಿಸಿದ್ದನ್ನು ಪ್ರತಿಭಟಿಸಿ ಶುಕ್ರವಾರದಿಂದ ಸೈಂಟ್ ಲೂಯಿಸ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.







