ಹೊಸ ಕಾನೂನುಗಳಿಂದ ಅಲ್ಪಸಂಖ್ಯಾತರಿಗೆ ಸಮಸ್ಯೆ: ಸಾದುದ್ದೀನ್ ಸಾಲಿಹಿ

ಬೆಂಗಳೂರು, ಸೆ.17: ದೇಶದ ಸಂವಿಧಾನವು ನಮಗೆ ಧರ್ಮ, ಆಹಾರ ಹಾಗೂ ಆಚರಣೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೂ, ಕೆಲವು ಹೊಸ ಕಾನೂನುಗಳ ಅನುಷ್ಠಾನದಿಂದಾಗಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಎಪಿಸಿಆರ್ ರಾಜ್ಯ ಘಟಕದ ಅಧ್ಯಕ್ಷ ನ್ಯಾಯವಾದಿ ಸಾದುದ್ದೀನ್ ಸಾಲಿಹಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಆರ್.ಟಿ.ನಗರದಲ್ಲಿರುವ ಶಾಂತಿ ಸದನದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಎಪಿಸಿಆರ್ ಪದಾಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾ ಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಸ್ತುತ ಸನ್ನಿವೇಶದಲ್ಲಿ ನಾವು ಧ್ವನಿ ಎತ್ತುವುದು ಅನಿವಾರ್ಯವಾಗಿದೆ. ದೇಶದಲ್ಲಿ ಜೈನರು, ಕ್ರೈಸ್ತರು, ಬೌದ್ಧರು ಸೇರಿದಂತೆ ಇನ್ನಿತರ ಅಲ್ಪಸಂಖ್ಯಾತರು ಇದ್ದಾರೆ. ಆದರೆ, ಅವರೆಲ್ಲ ನಮ್ಮ ಸಮುದಾಯದ ಬಳಿಕ ಗುರುತಿಸಲ್ಪಡುತ್ತಾರೆ. ಮೊದಲು ನಮ್ಮ ಸಮುದಾಯದವರು ದೌರ್ಜನ್ಯಕ್ಕೆ ಗುರಿಯಾಗುತ್ತಾರೆ ಎಂದು ಅವರು ಹೇಳಿದರು.
ಸಮಸ್ಯೆಗಳು ಎದುರಾದಾಗ ನಮ್ಮ ಹಕ್ಕುಗಳಿಗಾಗಿ ಹೋರಾಡುವ ಬದಲು ನಾವು, ಮೌನವಹಿಸುವುದಲ್ಲದೆ, ಏಕಾಂಗಿಯ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತೇವೆ. ಸಮುದಾಯದ ಯುವಕರು ಸೇರಿದಂತೆ ಪ್ರತಿಯೊಬ್ಬರೂ ಸಾಮಾಜಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಇತರ ಸಮುದಾಯದವರ ಗೌರವಕ್ಕೆ ಪಾತ್ರರಾಗಬೇಕು ಎಂದು ಸಾದುದ್ದೀನ್ ಸಾಲಿಹಿ ತಿಳಿಸಿದರು.
ಸಾಮಾಜಿಕ ಚಟುವಟಿಕೆಗಳಿಂದ ದೂರ ಉಳಿಯುವ ಮೂಲಕ ನಾವು ತಪ್ಪು ಮಾಡುತ್ತಿದ್ದೇವೆ. ಎಪಿಸಿಆರ್ ಬಡವರು ಹಾಗೂ ಸಂತ್ರಸ್ತರ ನಾಗರಿಕ ಹಕ್ಕುಗಳಿಗಾಗಿ ಹೋರಾಡುತ್ತಿದೆ. ಇದೊಂದು ರಾಷ್ಟ್ರೀಯ ಮಟ್ಟದ ಸಂಘಟನೆಯಾಗಿದ್ದು, ವಿವಿಧ ರಾಜ್ಯಗಳು, ಜಿಲ್ಲೆಗಳಲ್ಲಿ ತನ್ನ ಘಟಕಗಳನ್ನು ಹೊಂದಿದೆ ಎಂದರು.
ರಾಜ್ಯದ ಎಲ್ಲ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕರಿಗೆ ನಮ್ಮ ಸಂಘಟನೆಯ ಉದ್ದೇಶಗಳ ಕುರಿತು ಜಾಗೃತಿ ಮೂಡಿಸುವ ಮೂಲಕ, ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಜೊತೆ ಕೈ ಜೋಡಿಸುವಂತೆ ಪ್ರೇರೆಪಿಸಬೇಕಿದೆ ಎಂದು ಕರೆ ನೀಡಿದರು.
ಕಾರ್ಯಾಗಾರದಲ್ಲಿ ಎಪಿಸಿಆರ್ ಗುಲ್ಬರ್ಗ ಘಟಕದ ಕಾರ್ಯದರ್ಶಿ ನ್ಯಾಯವಾದಿ ಮುಖ್ತದೀರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಯಾಝ್ ಅಹ್ಮದ್, ಸಂಚಾಲಕ ಶೇಕ್ ಶಫಿ ಅಹ್ಮದ್, ನ್ಯಾಯವಾದಿ ಮಹಮೂದ್ ಖಾಝಿ, ಮುಶ್ಫೀಕ್ ರಝಾ ಖಾನ್, ಯೂಸುಫ್ ಕನ್ನಿ, ಇನಾಯತುಲ್ಲಾ ಗವಾಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







