ಸಂಸತ್ತಿನಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಶಕ್ತಿ ತುಂಬಬೇಕಿದೆ: ರಮೇಶ್‌ಬಾಬು
ಬೆಂಗಳೂರು, ಸೆ.16: ತಮಿಳುನಾಡು, ಆಂಧ್ರಪ್ರದೇಶ, ಬಿಹಾರ, ಓಡಿಶಾ ಮಾದರಿಯಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಶಕ್ತಿ ತುಂಬುವ ಕೆಲಸವನ್ನು ಜನರು ಮಾಡಬೇಕು. ಆಗ ಮಾತ್ರ ನಮ್ಮ ರಾಜ್ಯದ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ರಮೇಶ್‌ಬಾಬು ತಿಳಿಸಿದ್ದಾರೆ.
ರವಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬನವಾಸಿ ಬಳಗ ಆಯೋಜಿಸಿದ್ದ ‘ನುಡಿ ಸಮಾನತೆಯತ್ತ ನಮ್ಮ ನಡೆ’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಾದೇಶಿಕ ವಿಚಾರಗಳ ಬಗ್ಗೆ ಸಂಸತ್ತಿನಲ್ಲಿ ರಾಷ್ಟ್ರೀಯ ಪಕ್ಷಗಳು ಧ್ವನಿ ಎತ್ತುವಲ್ಲಿ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
1999ರ ನಂತರ ರಾಜ್ಯದ ಜನತೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಶೀರ್ವಾದ ಮಾಡಿದ್ದಾರೆ. ಆದರೆ, ಕಾವೇರಿ, ಮಹಾದಾಯಿ, ಕೃಷ್ಣ, ಬೆಳಗಾವಿಯ ಗಡಿ ವಿವಾದ ಸೇರಿದಂತೆ ಯಾವುದೇ ವಿಚಾರದಲ್ಲಿ ಬಿಜೆಪಿ ಪ್ರತಿನಿಧಿಗಳು ಸಂಸತ್ತಿನಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಿಲ್ಲ ಎಂದು ಆರೋಪಿಸಿದರು.
ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ರಾಜಕೀಯವಾಗಿ ಕಡು ವೈರಿಗಳು. ಆದರೂ, ತಮಿಳುನಾಡಿನ ವಿಚಾರ ಬಂದಾಗ ಪಕ್ಷಬೇಧ ಮರೆತು ಒಂದಾಗಿ ಸಂಸತ್ತಿನಲ್ಲಿ ಹೋರಾಟ ಮಾಡುತ್ತಾರೆ. ಆದರೆ, ನಮ್ಮ ರಾಜ್ಯದ ಸಂಸದರಿಂದ ಅಂತಹ ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ರಾಜಕೀಯವಾಗಿ ಸಂಸತ್ತಿನಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಶಕ್ತಿ ಸಿಗದಿದ್ದರೆ, ರಾಷ್ಟ್ರೀಯ ಪಕ್ಷಗಳ ಧೋರಣೆಯಿಂದ ನಮ್ಮ ಸಮಸ್ಯೆಗಳು ಯಾವ ಕಾರಣಕ್ಕೂ ಬಗೆಹರಿಯುವುದಿಲ್ಲ. ಮಹಾದಾಯಿ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಗೋವಾ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದರೂ, ಇಲ್ಲಿನ ಬಿಜೆಪಿ ನಾಯಕರ ನಿಯೋಗ ಗೋವಾ ಮುಖ್ಯಮಂತ್ರಿ ಜೊತೆ ಮಾತನಾಡಲು ಮುಂದಾಗುತ್ತಿಲ್ಲ ಎಂದು ಅವರು ಕಿಡಿಗಾರಿದರು.
ಪ್ರಧಾನಿ ನರೇಂದ್ರಮೋದಿ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮೈಸೂರನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ನಗರವಾಗಿ ಅಭಿವೃದ್ಧಿಪಡಿಸುವುದಾಗಿ ಮಾತುಕೊಟ್ಟಿದ್ದರು. ಆದರೆ, ಈವರೆಗೆ ಅದರ ಬಗ್ಗೆ ಚಕಾರವೆತ್ತಿಲ್ಲ ಎಂದು ರಮೇಶ್‌ಬಾಬು ಟೀಕಿಸಿದರು.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಳೆದ 70 ವರ್ಷಗಳಲ್ಲಿ ಹಿಂದಿ ಭಾಷೆ ಹೆಚ್ಚು ಬಳಕೆಯಲ್ಲಿರುವ ರಾಜ್ಯಗಳು ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ರೈಲ್ವೆ ಯೋಜನೆಗಳಿಂದ ಸಿಕ್ಕಿರುವ ಪ್ರಯೋಜವನ್ನು ನಾವು ಗಮನಿಸಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಕನ್ನಡ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಆದರೆ, ನಗರ ಪ್ರದೇಶಗಳಲ್ಲಿರುವ ಐಸಿಎಸ್ಸಿ ಹಾಗೂ ಸಿಬಿಎಸ್ಸಿ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಲು ರಾಜ್ಯ ಸರಕಾರಕ್ಕೆ ಅಧಿಕಾರವಿಲ್ಲದಂತಾಗಿದೆ. ಈ ಬಗ್ಗೆ ಸರಕಾರ ಯಾಕೆ ನಿಯಮಾವಳಿಗಳನ್ನು ರೂಪಿಸಬಾರದು. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಅನುಷ್ಠಾನಗೊಳಿಸಿದರೆ, ಇಡೀ ರಾಜ್ಯಕ್ಕೆ ಅನುಷ್ಠಾನಗೊಳಿಸಿ ದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಹೈಕೋರ್ಟ್ ವಕೀಲ ಮನು ಕುಲಕರ್ಣಿ, ಅಝೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಚಂದನ್‌ಗೌಡ, ಕ್ಲಿಯರ್ ಸಂಸ್ಥೆ ಕಾರ್ಯದರ್ಶಿ ಸೆಂಥಿಲ್‌ನಾಥನ್, ಬನವಾಸಿ ಬಳಗದ ಅಧ್ಯಕ್ಷ ಆನಂದ್ ಉಪಸ್ಥಿತರಿದ್ದರು.







