ಸತ್ಯಕ್ಕಾಗಿ ಮಡಿದ ವಿಚಾರವಾದಿಗಳ ಬದುಕು ಮಾದರಿ: ಡಾ.ಮುಹಮ್ಮದ್ ತಾಹಾ ಮತೀನ್
ಬೆಂಗಳೂರು, ಸೆ.17: ತಮ್ಮ ಬದುಕಿನುದ್ದಕ್ಕೂ ಸತ್ಯವನ್ನು ಪ್ರತಿಪಾದಿಸಿದಕ್ಕಾಗಿ ಮೂಲಭೂತವಾದಿಗಳಿಂದ ಹತ್ಯೆಗೀಡಾದ ವಿಚಾರವಾದಿಗಳಾದ ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್, ಡಾ.ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ತತ್ವ ಸಿದ್ಧಾಂತಗಳು ನಮಗೆ ಮಾದರಿಯಾಗಲಿ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಡಾ.ಮುಹಮ್ಮದ್ ತಾಹಾ ಮತೀನ್ ಆಶಿಸಿದ್ದಾರೆ.
ರವಿವಾರ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ನಗರದ ದಾರುಸ್ಸಲಾಮ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಈದ್ ಸೌಹಾರ್ದ’ ಕೂಟ ಉದ್ಘಾಟಿಸಿ ಮಾತನಾಡಿದ ಅವರು, ಸತ್ಯವನ್ನು ಪ್ರತಿಪಾದಿಸಲು ಯಾರಿಗೂ ಎದರಬೇಕಾಗಿಲ್ಲ. ಸತ್ಯವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲವೆಂದು ವಿಚಾರವಾದಿಗಳು ನಮಗೆ ಮನಗಾಣಿಸಿದ್ದಾರೆ ಎಂದು ತಿಳಿಸಿದರು.
ಸಮಾಜದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಲಿದೆ. ಕಷ್ಟಪಟ್ಟು ದುಡಿದ ರೈತರು ಬೆಳೆಗೆ ಸೂಕ್ತ ಬೆಲೆ ಸಿಗದೆ ಕಾಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆಯೂ ಕೆಲವರು 4 ಕೋಟಿ ರೂ.ಮೌಲ್ಯದ ಕೈ ಚೀಲವನ್ನು ಹೆಗಲಿಗೇರಿಸಿಕೊಂಡು ಹೋಗುವವರನ್ನು ಕಾಣುತ್ತಿದ್ದೇವೆ ಎಂದು ಅವರು ವಿಷಾದಿಸಿದರು.
ಸಮಾಜದಲ್ಲಿ ಸಂಪನ್ಮೂಲ ಅಸಮಾನ ಹಂಚಿಕೆಯಾಗುತ್ತಿದೆ. ದೇಶದ ಬಹುತೇಕ ಸಂಪತ್ತು ಕೆಲವೇ ವ್ಯಕ್ತಿಗಳ ಬಳಿ ಕೇಂದ್ರಕೃತವಾಗುತ್ತಿದೆ. ಬಡವರು ಮತ್ತಷ್ಟು ಬಡವರಾಗುತ್ತಾ, ಕನಿಷ್ಠ ಮೂಲಭೂತ ಅಗತ್ಯಗಳನ್ನೂ ಪೂರೈಸಿಕೊಳ್ಳಲಾಗದಂತಹ ಪರಿಸ್ಥಿತಿಯಲ್ಲಿ ನರಳುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಪ್ರಸ್ತುತ ಸಮಾಜ ಸಂವೇದನಾ ಹೀನತೆಯತ್ತ ಸಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
‘ವಾರ್ತಾಭಾರತಿ’ ಪತ್ರಿಕೆ ಅಂಕಣಕಾರ ರಂಜಾನ್ ದರ್ಗಾ ಮಾತನಾಡಿ, ಪ್ರಸ್ತುತ ದೇಶವು ಅತ್ಯಂತ ಆತಂಕದ ಸ್ಥಿತಿಯಲ್ಲಿದ್ದು, ಮೂಲಭೂತವಾದಿಗಳು ವಿಜೃಂಭಿಸುತ್ತಿದ್ದಾರೆ. ಇವರ ಹಿಡಿತದಲ್ಲಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ನರಳುವಂತಾಗಿದೆ. ಇಂತಹ ಪರಿಸ್ಥಿತಿಯಿಂದ ಹೊರ ಬರಬೇಕಾದರೆ ಮಾನವೀಯ ಮೌಲ್ಯಗಳುಳ್ಳ ಪ್ರತಿಯೊಬ್ಬರು ಸಂಘಟಿರಾಗಬೇಕಾಗಿದೆ ಎಂದು ತಿಳಿಸಿದರು.
ದಸಂಸ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಅಲಿಖಿತ ಸಂವಿಧಾನ ನಮ್ಮನ್ನು ಆಳುತ್ತಿದ್ದು, ಇಲ್ಲಿನ ಬಹುಸಂಸ್ಕೃತಿ, ಬಹು ಧರ್ಮಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ದೇಶಾದ್ಯಂತ ಗಲಭೆಗಳನ್ನು ಸೃಷ್ಟಿಸಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಎಲ್ಲ ಧರ್ಮಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ಗೌರವಿಸುವವರು ಮನುವಾದಿಗಳ ವಿರುದ್ಧ ಒಟ್ಟಾಗಿ ಹೋರಾಡಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಸಮಾಜಿಕ ಕಾರ್ಯಕರ್ತೆ ಕಾತ್ಯಾಯನಿ ಚಾಮರಾಜ್ ಮಾತನಾಡಿ, ಇಸ್ಲಾಮ್ ಧರ್ಮ ಪ್ರತಿಪಾದಿಸುವ ತತ್ವಗಳಿಗೂ ಅಂಬೇಡ್ಕರ್‌ರವರ ಸಂವಿಧಾನದ ಆಶಯಗಳಲ್ಲಿ ವ್ಯತ್ಯಾಸವಿಲ್ಲ. ಹೀಗಾಗಿ ಮುಸ್ಲಿಮ್ ಧರ್ಮದ ಆಶಯಗಳು ಅನ್ಯ ಧರ್ಮಿಗಳಿಗೂ ತಲುಪುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ಬೆಂಗಳೂರಿನ ಸಂಚಾಲಕ ಡಾ.ಬೆಳಗಾಮಿ ಮುಹಮ್ಮದ್ ಸಾದ್ ವಹಿಸಿದ್ದರು.







