ಹಿಂದಿನ ಕವಿಗಳ ಕಾವ್ಯಗಳಲ್ಲಿ ಸಂವೇದನೆ ಇನ್ನೂ ಜೀವಂತ: ಕವಿ ವೆಂಕಟೇಶ್ ಮೂರ್ತಿ
ಬೆಂಗಳೂರು, ಸೆ. 17: ಕನ್ನಡ ಸಾಹಿತ್ಯದ ಮೇರು ಪರ್ವತಗಳಾದ ಕುವೆಂಪು, ಬೇಂದ್ರೆ, ಪು.ತಿ.ನ ಅವರ ಕಾವ್ಯಗಳಲ್ಲಿ ಕಾವ್ಯ ಸಂವೇದನೆ ಇನ್ನೂ ಜೀವಂತವಾಗಿದೆ ಎಂದು ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಡಾ.ಪು.ತಿ.ನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಡಾ.ಪು.ತಿ.ನರಸಿಂಹಾಚಾರ್ ಅವರಿಗೆ ಕಾವ್ಯ ನಮನ ಕಾರ್ಯಕ್ರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ಕವಿಗೋಷ್ಠಿಗಳು ಸಾಮಾನ್ಯ ಕಾರ್ಯಕ್ರಮಗಳಂತೆ ಮೂಡಿಬರುತ್ತಿವೆ ಹಿಂದೇ ಕುವೆಂಪು, ಕಾವ್ಯಗಳನ್ನು ಓದುತ್ತಿದ್ದರೆ ನೂರಾರು ಜನರು ಕಾತುರದಿಂದ ಕೇಳುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಕವಿಗೋಷ್ಠಿ ನೈಜ ವಾತಾವರಣ ಕಣ್ಮರೆಯಾಗುತ್ತಿದೆ ಎಂದರು.
ಸಾಹಿತಿ ಡಾ.ಸುಮತೀಂದ್ರ ನಾಡಿಗ ಮಾತನಾಡಿ, ದಂಪತಿ ಗೀತೆಯನ್ನು ರಚಿಸಿ ಪುತಿನ ಅವರಿಗೆ ನೀಡಿದ್ದೆ. ಗೀತೆಯನ್ನು ಓದಿದ ಅವರು, ಗೀತೆಯಲ್ಲಿ ನೈಜ ಕತೆ ಮೂಡಿದೆ.ಗೀತೆಯ ಕೆಲವು ಸಾಲುಗಳು ಆಲೋಚನೆಯಲ್ಲಿ ಮುಳುಗಿಸುವಂತೆ ಮಾಡುತ್ತವೆ. ಟ್ಟಿನಲ್ಲಿ ಒಂದು ಉತ್ತಮ ಕಾವ್ಯ ಬರೆದಿದ್ದೀರಾ ಎಂದು ಪ್ರಶಂಸಿಸಿ ಪತ್ರ ಬರೆದಿದ್ದರು ಎಂದು ಸ್ಮರಿಸಿದರು.
ಪುತಿನ ಅವರ ಮಾತುಗಳಲ್ಲಿ ಸಂಸ್ಕೃತಿಯ ತಿರುಳಿತ್ತು. ಅವರ ಮಾತುಗಳನ್ನು ಸಂಗ್ರಸಿಟ್ಟಿದ್ದರೆ ಹಲವು ಸಂಪುಟಗಳನ್ನು ರಚಿಸಬಹುದಿತ್ತು. ಅವರ ಮಾತುಗಳನ್ನು ಬರೆದು ಇಟ್ಟುಕೊಳ್ಳದೇ ಇರುವುದು ಕನ್ನಡ ಸಾಹಿತ್ಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದರು.
ಸಾಹಿತಿ ಪ್ರತಿಭಾ ನಂದಕುಮಾರ ಮಾತನಾಡಿ, ಪುತ್ತಿನ ಅವರ ಸಾಹಿತ್ಯ ಇಂದಿನ ಯುವಕರಿಗೆ ತಲುಪಿಸಲು ‘ಪುತಿನ ಮರು ಓದು’ ಎಂಬ ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕವಿ ಬಿ.ಆರ್ ಲಕ್ಷ್ಮಣರಾವ್ ಅವರ ‘ನನ್ನ ಕತೆ’ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು.
ಈ ವೇಳೆ ಸಾಹಿತಿಗಳಾದ ಲಲಿತಾ ಸಿದ್ದಬಸವಯ್ಯ, ಡಾ.ಎಚ್.ಎಲ್.ಪುಷ್ಪ, ಡುಂಡಿರಾಜ್, ಡಾ.ಟಿ.ಯಲ್ಲಪ್ಪ, ಬಿ.ಆರ್.ಲಕ್ಷ್ಮಣರಾವ್ ಸೇರಿದಂತೆ ಇತರರು ಇದ್ದರು.







