ಮ್ಯಾಚ್ ಫಿಕ್ಸಿಂಗ್: ಚಾಮರ ಸಿಲ್ವಗೆ 2 ವರ್ಷ ನಿಷೇಧ

ಕೊಲಂಬೊ, ಸೆ.17: ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್ ಚಾಮರ ಸಿಲ್ವರಿಗೆ 2017ರ ಆರಂಭದಲ್ಲಿ ಆಡಿದ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಶ್ರೀಲಂಕಾ ಕ್ರಿಕೆಟ್ ಸಂಸ್ಥೆಯು 2 ವರ್ಷಗಳ ನಿಷೇಧ ವಿಧಿಸಿದೆ.
ಎರಡು ವರ್ಷಗಳ ಕಾಲ ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೇ ಕಾರ್ಯ ಚಟುವಟಿಕೆಗಳನ್ನು ನಡೆಸದಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿರ್ಬಂಧ ಹೇರಿದೆ.
ಪಣದುರ ಕ್ರಿಕೆಟ್ ಕ್ಲಬ್ ಹಾಗೂ ಕಲುತರ ಫಿಸಿಕಲ್ ಕಲ್ಚರ್ ಕ್ಲಬ್ ತಂಡಗಳ ನಡುವೆ ಜನವರಿ 23ರಿಂದ 25ರ ತನಕ ನಡೆದ 3 ದಿನಗಳ ಪಂದ್ಯದ ವೇಳೆ ಚಾಮರ ಸಿಲ್ವ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದರೆಂಬ ಆರೋಪ ಎದುರಿಸುತ್ತಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ 7 ತಿಂಗಳ ನಂತರ ತನ್ನ ಆದೇಶವನ್ನು ಹೊರಡಿಸಿದೆ.
ನೆರೆಹೊರೆಯ 2 ಕ್ಲಬ್‌ಗಳ ನಡುವೆ ನಡೆದ ಪಂದ್ಯದಲ್ಲಿ ಒಂದೇ ದಿನದಲ್ಲಿ 13 ಓವರ್‌ಗಳಲ್ಲಿ 24 ವಿಕೆಟ್‌ಗಳು ಉರುಳಿದ ಬೆನ್ನಲ್ಲೇ ಈ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿರುವ ಗುಮಾನಿ ವ್ಯಕ್ತವಾಗಿತ್ತು. ಲಂಕಾ ಕ್ರಿಕೆಟ್ ಮಂಡಳಿಯು ಈ ಬಗ್ಗೆ ತನಿಖೆಯನ್ನು ಆರಂಭಿಸಿತ್ತು.
ಚಾಮರ ಸಿಲ್ವ ಅವರು ಪಣದುರ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಅವರಿಗೆ ಆಡಲು, ಕೋಚಿಂಗ್ ಹಾಗೂ ಯಾವುದೇ ಕ್ರಿಕೆಟ್ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಲಂಕಾ ಮಂಡಳಿಯು 2 ವರ್ಷಗಳ ನಿಷೇಧ ವಿಧಿಸಿದೆ.
ಸಿಲ್ವ 1999 ಮತ್ತು 2011ರ ಅವಧಿಯಲ್ಲಿ 11 ಟೆಸ್ಟ್ ಹಾಗೂ 75 ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಕಲುತರ ಕ್ರಿಕೆಟ್ ಕ್ಲಬ್‌ನ ನಾಯಕ ಮನೋಜ್ ದೇಶಪ್ರಿಯ ಅವರ ವಿರುದ್ಧವೂ 2 ವರ್ಷಗಳ ನಿಷೇಧ ವಿಧಿಸಲಾಗಿದೆ.
ಎರಡು ತಂಡಗಳ ಉಳಿದ ಆಟಗಾರರು ಮತ್ತು ಅವರ ಕೋಚ್‌ಗಳಿಗೆ ಒಂದು ವರ್ಷದ ಅವಧಿಯ ನಿಷೇಧ ವಿಧಿಸಲಾಗಿದೆ. ಅಲ್ಲದೆ ಎರಡೂ ತಂಡಗಳು ತಲಾ 5ಲಕ್ಷ ರೂ. ದಂಡ ಪಾವತಿಸಬೇಕಾಗಿದೆ.
ಶ್ರೀಲಂಕಾ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯು ತ್ತಿರುವ ಬಗ್ಗೆ ವಿಶ್ವಕಪ್ ಗೆದ್ದ ಲಂಕಾ ತಂಡದ ನಾಯಕ ಅರ್ಜುನ್ ರಣತುಂಗ ಈ ಹಿಂದೆ ಆರೋಪ ಮಾಡಿದ್ದರು. ಭಾರತ ವಿರುದ್ಧ ಶ್ರೀಲಂಕಾ ತಂಡದ ಸರಣಿಯ ಸೋಲಿನ ಬಳಿಕ ಸುಮತಿಪಾಲರ ರಾಜೀನಾಮೆಗೆ ಒತ್ತಡ ಹೆಚ್ಚಾಗಿದೆ.







