ನಿರ್ಮಾಪಕ ಆನಂದ ಅಪ್ಪುಗೋಳ ಬಂಧನ
4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

ಬೆಳಗಾವಿ, ಸೆ. 18: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಹಕಾರಿ ಬ್ಯಾಂಕ್ ದಿವಾಳಿ ಪ್ರಕರಣ ಸಂಬಂಧ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಅವರನ್ನು ರವಿವಾರ ಮುಂಬೈನಲ್ಲಿ ಬಂಧಿಸಲಾಗಿದೆ.
ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದ ಅವರನ್ನು ಬೆಳಗಾವಿ ಪೋಲಿಸರು ಬಂಧಿಸಿದ್ದು, ಬೆಳಗಾವಿಯ 3ನೆ ಜೆಎಂಎಫ್‌ಸಿ ನ್ಯಾಯಾಲಯದೆದುರು ಹಾಜರುಪಡಿಸಿದರು. ಬಂಧಿತ ಆರೋಪಿಯನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ಸೆ.4ರಂದು ಬ್ಯಾಂಕಿನ ಆಡಳಿತ ಮಂಡಳಿ ವಿರುದ್ಧ ನಗರದ ಖಡೇಬಝಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ದೂರು ಸಲ್ಲಿಸಿದ್ದರು.
ಬ್ಯಾಂಕ್ ಠೇವಣಿದಾರರು ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಸೇರಿ ಆಡಳಿತ ಮಂಡಳಿ ಸದಸ್ಯರ ವಿರುದ್ಧ ದೂರು ನೀಡಿದ್ದರು. ಠೇವಣಿದಾರರಿಗೆ ನಂಬಿಕೆ ದ್ರೋಹ, ಮೋಸ, ವಂಚನೆ ಮಾಡಿದ ಆರೋಪ. ಸಾರ್ವಜನಿಕರ ಠೇವಣಿ ಹಣವನ್ನ ಸಕಾಲಕ್ಕೆ ಪಾವತಿಸಿಲ್ಲ.
ಬ್ಯಾಂಕ್ ಕಚೇರಿಗೆ ಬೀಗ ಹಾಕಿ ಠೇವಣಿದಾರರಿಗೆ ಮೋಸ ಮಾಡಲಾಗಿದೆ. ಬ್ಯಾಂಕ್ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ತಲೆ ಮರೆಸಿಕೊಂಡಿದ್ದಾರೆ ಎಂದು ದೂರು ನೀಡಲಾಗಿತ್ತು. ಸಹಕಾರಿ ನಿಯಮ ಗಾಳಿಗೆ ತೂರಿ ಠೇವಣಿ ಹಣವನ್ನು ಬೇಕಾಬಿಟ್ಟಿ ವಿನಿಯೋಗ ಮಾಡಲಾಗಿದೆ ಎಂದು ಆರೋಪಿಸಿದ್ದರು.







