ರೊಹಿಂಗ್ಯಾ ವಲಸಿಗರಿಂದ ಭದ್ರತೆಗೆ ಆತಂಕ: ಸುಪ್ರೀಂಗೆ ಕೇಂದ್ರ ಸರಕಾರ ಪ್ರತಿಪಾದನೆ

ಹೊಸದಿಲ್ಲಿ, ಸೆ. 18: ರೊಹಿಂಗ್ಯಾ ಮುಸ್ಲಿಮರು ದೇಶಕ್ಕೆ ಅಕ್ರಮ ವಲಸಿಗರು. ಅವರ ವಾಸ್ತವ್ಯದಿಂದ ದೇಶದ ಭದ್ರತೆ ಮೇಲೆ ಸಂಕೀರ್ಣ ಪರಿಣಾಮ ಉಂಟಾಗಬಹುದು ಎಂದು ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಗೆ ಸಲ್ಲಿಸಿದ ಅಫಿದಾವಿತ್‌ನಲ್ಲಿ, ದೇಶದ ಯಾವುದೇ ಭಾಗದಲ್ಲಿ ವಾಸಿಸುವ ಹಾಗೂ ನೆಲೆಗೊಳ್ಳುವ ಮೂಲಭೂತ ಹಕ್ಕು ಪ್ರಜೆಗಳಿಗೆ ಮಾತ್ರ ಇದೆ. ಅಕ್ರಮ ವಲಸಿಗರು ಈ ಹಕ್ಕನ್ನು ಪ್ರತಿಪಾದಿಸಲು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರುವಂತಿಲ್ಲ ಎಂದಿದೆ.
ಸೋಮವಾರ ಬೆಳಗ್ಗೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಕೇಂದ್ರ ಸರಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಹೇಳಿಕೆ ಆಲಿಸಿತು. ಅಲ್ಲದೆ ರೊಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ನಿಗದಿಪಡಿಸಿತು.
ಈ ವಿಷಯದ ಕುರಿತು ವಿವಿಧ ಭದ್ರತಾ ಸಂಸ್ಥೆಗಳು ಸಂಗ್ರಹಿಸಿದ ಮಾಹಿತಿ ಹಾಗೂ ಭದ್ರತೆಗೆ ಬೆದರಿಕೆ ಇರುವ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಸರಕಾರ ಅಫಿದಾವಿತ್‌ನಲ್ಲಿ ತಿಳಿಸಿದೆ.







