ಬೆಂಗಳೂರು : ಆಧಾರ್ ಕಡ್ಡಾಯ ಖಂಡಿಸಿ ಪ್ರತಿಭಟನೆ

ಬೆಂಗಳೂರು, ಸೆ. 18: ಆಧಾರ್ ಮೂಲಕ ಕೇಂದ್ರ ಸರಕಾರ ನಡೆಸುತ್ತಿರುವ ಅತಿಕ್ರಮಣವನ್ನು ಕೊನೆಗೊಳಿಸುವಂತೆ ಹಾಗೂ ನಾಗರಿಕತ್ವವನ್ನು ಶಿಥಿಲಗೊಳಿಸುತ್ತಿರುವ ಆಧಾರ್ ವ್ಯವಸ್ಥೆಯನ್ನು ವಿರೋಧಿಸಿ ಆಹಾರದ ಹಕ್ಕಿಗಾಗಿ ಜನಾಂದೋಲನ ಸಂಘಟನೆ ಕಾರ್ಯಕರ್ತರು ನಗರದ ಪುರಭವನದ ಎದುರು ಪ್ರತಿಭಟನೆ ನಡೆಸಿದರು.
ಸಾರ್ವಜನಿಕರ ಖಾಸಗಿ ಮಾಹಿತಿಯನ್ನು ಹಿಡಿದಿಟ್ಟುಕೊಂಡಿರುವ ಆಧಾರ್ ಅನ್ನು ಎಲ್ಲ ಯೋಜನೆಗಳಿಗೆ ಅಳವಡಿಸುವುದರ ಮೂಲಕ ಜನರ ಖಾಸಗಿ ಬದುಕಿನ ಮೇಲೆ ಸರಕಾರ ದಾಳಿ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಇದು ಸಮಾಜಕ್ಕೆ ಮಾರಕವಾಗಲಿದ್ದು, ಕೂಡಲೇ ಇದನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಆಧಾರ್ ನಮ್ಮ ಖಾಸಗಿತನದ ಹಕ್ಕನ್ನು ಉಲ್ಲಂಘಿಸುವುದರ ಜೊತೆಗೆ ಸಾಮಾಜಿಕ ಭದ್ರತೆಯ ಸೌಲಭ್ಯಗಳನ್ನು ಬಡತನದಿಂದ ಬದುಕುತ್ತಿರುವ ಸಮುದಾಯಗಳಿಗೆ ನಿರಾಕರಿಸುತ್ತಿದೆ. ಸಾಮಾಜಿಕ ಸೌಲಭ್ಯಗಳಾದ ಪಡಿತರ ವ್ಯವಸ್ಥೆ, ಪಿಂಚಣಿ, ಉದ್ಯೋಗ ಖಾತ್ರಿ, ಆರೋಗ್ಯ ಸೇವೆ, ಶಾಲಾ ದಾಖಲಾತಿ, ವಿದ್ಯಾರ್ಥಿ ವೇತನ, ಬರ ಪರಿಹಾರ ಹೀಗೆ ಬದುಕಿನ ಅವಶ್ಯಕತೆಗಳಿಗೆ ಜೋಡಿಸಿ, ಜನಸಾಮಾನ್ಯರ ಮೇಲೆ ಸರಕಾರ ತನ್ನ ಹಿಡಿತವನ್ನು ಸಾಧಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಆಧಾರ್ ಸಾಮಾಜಿಕ ಸೇವೆಗಳಿಗೆ ಜೋಡಿಸಬಾರದು ಹಾಗೂ ಎಲ್ಲ ಸೇವೆಗಳಿಗೂ ಕಡ್ಡಾಯಗೊಳಿಸಬಾರದು ಎಂದು ನ್ಯಾಯಾಲಯಗಳು ತೀರ್ಪು ನೀಡಿದ್ದರೂ, ಕೇಂದ್ರ ಸರಕಾರ ಆಧಾರ್ ಅನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಈ ಮೂಲಕ ಸಾಮಾನ್ಯ ಜನರ ಬದುಕಿನ ಮೇಲೆ ಚೆಲ್ಲಾಟವಾಡಲು ಮುಂದಾಗಿದೆ ಎಂದು ಆರೋಪಿಸಿದರು.







