‘ಸೂಟ್‌ಕೇಸ್ ಸಂಸ್ಕೃತಿ’ಯಿಂದ ಬೇಸತ್ತು ಜೆಡಿಎಸ್‌ಗೆ ರಾಜೀನಾಮೆ: ಪ್ರಭಾಕರ್ ರೆಡ್ಡಿ
ಬೆಂಗಳೂರು, ಸೆ.18: ಜೆಡಿಎಸ್ ಪಕ್ಷದಲ್ಲಿನ ಸೂಟ್‌ಕೇಸ್ ಸಂಸ್ಕೃತಿಯಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಂ.ಸಿ.ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.
ಸೋಮವಾರ ಕೆ.ಆರ್.ಪುರದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷವನ್ನು ಮಾರಾಟದ ಸರಕು ಮಾಡಿಕೊಂಡಿರುವ ನಾಯಕರ ನಡುವೆ, ಪ್ರಾಮಾಣಿಕವಾಗಿ ಪಕ್ಷವನ್ನು ಕಟ್ಟಿ ಬೆಳೆಸುತ್ತಿರುವ ನನಗೆ ನಾಯಕರ ವರ್ತನೆಯಿಂದ ಬೇಸರವಾಗಿದೆ ಎಂದರು.
ಜೆಡಿಎಸ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಪ್ರಕಾಶ್‌ಗೆ ಕೆ.ಆರ್.ಪುರ ಕ್ಷೇತ್ರದ ಜೆಡಿಎಸ್ ಮುಖಂಡ ಬಾಲಕೃಷ್ಣ ಹಾಗೂ ಡಿ.ಎ.ಗೋಪಾಲ್ ಹಣ ನೀಡಿ, ಯಾರೋ ದೇವರಾಜ್ ಎಂಬವರಿಗೆ ಅಧ್ಯಕ್ಷರನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಪ್ರಭಾಕರ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಎ.ಕೃಷ್ಣಪ್ಪ ಜೆಡಿಎಸ್ ಸೇರಿದಾಗಲೂ ಅವರ ಸಹೋದರ ಡಿ.ಎ.ಗೋಪಾಲ್ ಕಾಂಗ್ರೆಸ್‌ನಲ್ಲೆ ಇದ್ದರು. ಈಗ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆಯದೆ, ತನ್ನನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.
ಈ ಹಿಂದಿನ ಚುನಾವಣೆಗಳಲ್ಲಿ ಜೆ.ರವಿಪ್ರಕಾಶ್, ಎಲ್.ಮುನಿಸ್ವಾಮಿ ಎಂಬವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿತ್ತು. ಆದರೆ, ಅವರು ಪಕ್ಷವನ್ನು ಮಾರಿಕೊಂಡು ಕಾಂಗ್ರೆಸ್‌ಗೆ ಹೋದರು. ನಾವು ಕಳೆದ 25 ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುತ್ತಿದ್ದರೂ ಗೌರವವಿಲ್ಲದಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಡಿ.ಎ.ಗೋಪಾಲ್, ಬಾಲಕೃಷ್ಣ ಸೇರಿದಂತೆ ಇನ್ನಿತರ ಕಿಡಿಗೇಡಿಗಳು, ಪಕ್ಷವನ್ನು ಮಾರಿಕೊಳ್ಳಲು ಮುಂದಾಗಿದ್ದಾರೆ. ಮಾಜಿ ಶಾಸಕ ನಂದೀಶ್‌ರೆಡ್ಡಿ ಮನೆಗೆ ಹೋಗಿ, ಹಾಲಿ ಶಾಸಕ ಭೈರತಿ ಬಸವರಾಜನನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲು 5 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಪ್ರಭಾಕರ್‌ರೆಡ್ಡಿ ಆರೋಪಿಸಿದರು.
ಪಕ್ಷದಲ್ಲಿನ ಈ ಚಟುವಟಿಕೆಗಳಿಂದ ಬೇಸತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸಮಸ್ಯೆಯನ್ನು ಬಗೆಹರಿಸಲು ಜೆಡಿಎಸ್ ವರಿಷ್ಠರು ಹಾಗೂ ರಾಜ್ಯಾಧ್ಯಕ್ಷರು ಶೀಘ್ರವೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಇನ್ನೆರೆಡು ಮೂರು ದಿನಗಳಲ್ಲಿ ಕಾರ್ಯಕರ್ತರ ಸಭೆ ಕರೆದು, ಅವರ ಆಶಯದಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಜೆಡಿಎಸ್ ಮುಖಂಡರಾದ ಕೃಷ್ಣಮೂರ್ತಿ, ಶರ್ಮಾ, ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಶರ್ಮಾ ಅವರಿಗೆ ತಲುಪಿಸಿದರು.







