ಕಾಂಗ್ರೆಸ್ ಸಂತಾಪ ಸಭೆ : ಖಮರುಲ್ ಇಸ್ಲಾಂ ನಿಧನಕ್ಕೆ ಕಂಬನಿ

ಮಡಿಕೇರಿ,ಸೆ. 18: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ತೀವ್ರ ಸಂತಾಪ ಸೂಚಿಸಿದೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಕೆ.ಎ.ಯಾಕೂಬ್ ಅವರ ಅಧ್ಯಕ್ಷತೆಯಲ್ಲಿ ಸಂತಾಪ ಸಭೆ ನಡೆಯಿತು.
ಮೈಸೂರು ವಿಭಾಗದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಸಿ. ರಫೀಕ್ ಅಹಮ್ಮದ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಖಮರುಲ್ ಇಸ್ಲಾಂ ಅವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಆಘಾತವುಂಟಾಗಿದೆ ಎಂದರು. ಜನಪರ ಕಾಳಜಿ ಹೊಂದಿದ್ದ ಒಬ್ಬ ನಾಯಕನನ್ನು ಪಕ್ಷ ಕಳೆದುಕೊಂಡಿದ್ದು, ಅವರ ಮಾರ್ಗದರ್ಶನ ಎಲ್ಲರಿಗೂ ಸ್ಫೂರ್ತಿದಾಯಕ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎ.ಯಾಕುಬ್, ಖಮರುಲ್ ಇಸ್ಲಾಂ ಅವರ ನಿಧನದಿಂದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕಕ್ಕೆ ನಷ್ಟವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು ಕಿರಿಯ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದರು ಎಂದು ಸ್ಮರಿಸಿದರು.
ಮೂಡಾ ಮಾಜಿ ಅಧ್ಯಕ್ಷರಾದ ಸುರಯ್ಯಾ ಅಬ್ರಾರ್, ನಗರಸಭೆಯ ಮಾಜಿ ಅಧ್ಯಕ್ಷರಾದ ಜುಲೇಕಾಬಿ, ಪ್ರಧಾನ ಕಾರ್ಯದರ್ಶಿ ಖಾಲಿದ್ ಹಾಕತ್ತೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಬ್ಬಾಸ್ ಹಾಜಿ, ಅಬ್ದುಲ್ ರೆಹಮಾನ್‍ಬಾಪು, ಮ್ಯಾಥ್ಯು, ಕೆ.ಎ.ಬಶೀರ್, ಫೌಲಸ್ ಮತ್ತಿತರರು ಸಂತಾಪ ಸಭೆಯಲ್ಲಿ ಪಾಲ್ಗೊಂಡಿದ್ದರು







