ಲಾರಿ ಹರಿದು ಬಾಲಕ ಮೃತ್ಯು ; ಗ್ರಾಮಸ್ಥರಿಂದ ಪ್ರತಿಭಟನೆ

ಮಂಡ್ಯ, ಸೆ.18: ಲಾರಿ ಹರಿದು ಶಾಲಾ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಬೇಬಿ ಗೇಟ್ ಬಳಿ ಸೋಮವಾರ ಸಂಜೆ ನಡೆದಿದೆ.
ಬೇಬಿ ಗೇಟ್ ಬಳಿಯ ಸರಕಾರಿ ಪ್ರೌಢಶಾಲೆಯಿಂದ ಬೈಸಿಕಲ್‍ನಲ್ಲಿ ಮನೆಗೆ ತೆರಳುತ್ತಿದ್ದ ತಾಲೂಕಿನ ಹನಗನಹಳ್ಳಿ ಗ್ರಾಮದ ಅಯ್ಯಣ್ಣ ಎಂಬವರ ಪುತ್ರ ಎಚ್.ದಿಲೀಪ್(14) ಸಾವನ್ನಪ್ಪಿದ ಬಾಲಕ.
ಘಟನೆ ನಡೆದ ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಗ್ರಾಮಸ್ಥರು ಲಾರಿ ಟೈರ್ ಗಾಳಿ ತೆಗೆದು ಗಾಜುಗಳನ್ನು ಪುಡಿಪುಡಿ ಮಾಡಿದರು. ಟೈರ್ ಬೆಂಕಿಹಾಕಿ ರಸ್ತೆ ತಡೆ ನಡೆಸಿದರು.
ಕೂಡಲೇ ಚಾಲಕನ ಬಂಧಿಸಿ ಶಿಕ್ಷಿಸಬೇಕು. ವಾಹನಗಳ ಸಂಚಾರದ ಮೇಲೆ ನಿಯಂತ್ರಣ ಹೇರಬೇಕು. ಬಾಲಕನ ಪೋಷಕರಿಗೆ ಸೂಕ್ತ ಪರಿಹಾರ ನೀಡಬೇಕು. ಅಲ್ಲಿವರೆಗೂ ಕದಲುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದರು.
ತಮ್ಮ ಮನವಿಗೆ ಗ್ರಾಮಸ್ಥರು ಸ್ಪಂದಿಸದ ಕಾರಣ ಲಘುಲಾಠಿ ಪ್ರಹಾರ ನಡೆಸಿ ಚದುರಿಸಿದ ಪರಿಸ್ಥಿತಿಯನ್ನು ತಹಬದಿಗೆ ತಂದರು. ಈ ಸಂಬಂಧ ಬಸರಾಳು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





