ಪಿಯಾನೋ ವಾದಕ ಕರಣ್ ಜೋಸೆಫ್ ಸಾವಿನ ಸೂಕ್ತ ತನಿಖೆಗೆ ಆಗ್ರಹ
ಬೆಂಗಳೂರು, ಸೆ. 18: ವಿಶ್ವವಿಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ಖಾನ್ ಅವರ ಪಿಯಾನೋವಾದಕ ಕರಣ್ ಜೋಸೆಫ್ ಅನುಮಾನಾಸ್ಪಾದ ಸಾವಿನ ತನಿಖೆಯನ್ನು ತೀವ್ರಗೊಳಿಸಿ, ಸೂಕ್ತ ನ್ಯಾಯ ಕೊಡಿಸಬೇಕು ಎಂದು ಕರಣ್ ತಂದೆ ಡಾ.ಥಾಮಸ್ ಜೋಸೆಫ್ ಮನವಿ ಮಾಡಿದರು.
ಮಗನನ್ನು ಕಳೆದುಕೊಂಡು ನಮಗಾಗಿರುವ ನೋವು ಹಾಗೂ ಆಘಾತ ಬೇರೆ ಯಾವ ಪೋಷಕರಿಗೂ ಬರಬಾರದು. ಈ ಕಾರಣಕ್ಕಾಗಿ ನಾವು ಸರಿಯಾದ ತನಿಖೆ ನಡೆಸಿ, ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕಳೆದ ಸೆ.9 ರಂದು ಕರಣ್ ಜೋಸೆಫ್ ಮುಂಬೈನ ಅಪಾರ್ಟ್‌ಮೆಂಟ್‌ವೊಂದರಲ್ಲಿ 12 ನೆ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದ. ತಮ್ಮ ಮಗ ಆತ್ಮಹತ್ಯೆ ಮಾಡಿಕೊಳ್ಳುವಂತಹ ದುರ್ಬಲ ಮನಸ್ಸಿನವನು ಅಲ್ಲ. ಅವನು ಯಾವುದೇ ಖಿನ್ನತೆಗೂ ಒಳಗಾಗಿರಲಿಲ್ಲ. ಆದರೆ, ಅವನ ಸಾವಿನ ಸುತ್ತ ಹಲವು ಅನುಮಾನಗಳು ಸೃಷ್ಟಿಯಾಗಿವೆ. ಹೀಗಾಗಿ, ಸೂಕ್ತ ತನಿಖೆ ಮಾಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ರೆಹಮಾನ್ ಜೊತೆಗೆ ನನ್ನ ಮಗ ಕರಣ್ ಜೋಸೆಫ್ ಹೊಂದಿದ್ದ ಒಪ್ಪಂದ ಅವಧಿ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಮುಗಿದು ಹೋಗಿತ್ತು. ಆದರೆ, ಅವರು ರೇವಾ ಸಂಸ್ಥೆಯ ಮಾಲಕರ ಮತ್ತು ಉದ್ಯಮಿ ರಿಶೀಷ ಅವರೊಂದಿಗೆ ಮತ್ತೊಂದು ಒಪ್ಪಂದ ಮಾಡಿಕೊಳ್ಳಬೇಕಿತ್ತು.
ಆದರೆ, ಇದರ ನಡುವೆ ನನ್ನ ಮಗನ ಸಾವು ನಡೆದಿದೆ. ರಿಶೀಷ ಕರಣ್‌ಗೆ ಬೇರೆ ಯಾರಿಗೂ ಪಿಯಾನೋ ನುಡಿಸಬಾರದು ಎನ್ನುವ ನಿರ್ಬಂಧದೊಂದಿಗೆ ಒಪ್ಪಂದ ಮಾಡಿಕೊಳ್ಳಲು ತಿಳಿಸಿದ್ದರು. ಹೀಗಾಗಿ, ಇದರ ಹಿಂದೆ ಹಲವು ಅನುಮಾನಗಳಿದ್ದು, ಪೊಲೀಸರು ಸೂಕ್ತ ತನಿಖೆ ಮಾಡಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.







