ಮೈಸೂರಿನ ಅರಮನೆಯ ಸ್ತಂಭಗಳಿಗೆ ಸ್ವರ್ಣ ಲೇಪನ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಸೆ.18: ಖ್ಯಾತ ಕಲಾವಿದ ಗಂಜೀಫ ರಘುಪತಿ ಭಟ್ ಅವರಿಂದ ಮೈಸೂರಿನ ಅರಮನೆ ದರ್ಬಾರ್ ಹಾಲ್‌ನ ಸ್ತಂಭಗಳ ಸ್ವರ್ಣ ಲೇಪನ ಕಾರ್ಯವನ್ನು ಮುಂದುವರಿಸುವ ವಿಚಾರ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.
ಈ ಸಂಬಂಧ ಬಸವರಾಜ ಅರಸ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಮತ್ತು ಮೈಸೂರು ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ.
ಮೈಸೂರು ಅರಮನೆ ದರ್ಬಾರ್ ಹಾಲ್ ಮತ್ತು ಅಲ್ಲಿನ ಕೆಲ ಸ್ತಂಭಗಳಿಗೆ ಸ್ವರ್ಣ ಲೇಪನ ಮಾಡಲು ಮೈಸೂರು ಅರಮನೆ ಮಂಡಳಿ ತೀರ್ಮಾನಿಸಿತ್ತು. ಅದರಂತೆ 3.5 ಕೋಟಿ ರೂ. ವೆಚ್ಚದಲ್ಲಿ ಸ್ವರ್ಣ ಲೇಪನದ ಗುತ್ತಿಗೆಯನ್ನು ಖ್ಯಾತ ಕಲಾವಿದ ಗಂಜೀಫ ರಘುಪತಿ ಭಟ್ ಅವರು ಪಡೆದು 2013ರಲ್ಲಿ ಪೂರ್ಣಗೊಳಿಸಿದರು. ತದನಂತರ ಉಳಿದ 72 ಸ್ತಂಭಗಳಿಗೆ ಸ್ವರ್ಣ ಲೇಪನ ಮಾಡಿಸಲು ಸರಕಾರ ಸಮ್ಮತಿ ಸೂಚಿಸಿ ಹಣವನ್ನು ಬಿಡುಗಡೆ ಮಾಡಲು ತೀರ್ಮಾನಿಸಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಮಧ್ಯೆ ಜೀವರಾಜು ಎಂಬುವರು ಸ್ವರ್ಣ ಲೇಪನ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿಕೊಂಡು ರಘುಪತಿ ಭಟ್ ವಿರುದ್ದ ಎಫ್‌ಐಆರ್ ದಾಖಲಿಸಿದರು. ಆದರೆ, ತಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ ಎಂದು ರಘುಪತಿ ಭಟ್ ತಿಳಿಸಿದ್ದರು. ಅಲ್ಲದೆ, ಮನನೊಂದು ಸ್ವರ್ಣ ಲೇಪನ ಮಾಡಲು ಮುಂದೆ ಬರುತ್ತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ತದನಂತರ ಸ್ವರ್ಣ ಲೇಪನ ಕಾರ್ಯ ಮುಂದುವರಿಸುವಂತೆ ಖುದ್ದು ರಾಜ್ಯ ಸರಕಾರವೇ ಮನವಿ ಸಲ್ಲಿಸಿದರೂ ಕಲಾವಿದ ರಘುಪತಿ ಭಟ್ ಒಪ್ಪಲಿಲ್ಲ. ಇದರಿಂದ ಸ್ವರ್ಣ ಲೇಪನ ಕಾರ್ಯ ಸ್ಥಗಿತಗೊಂಡಿದೆ. ಇನ್ನು ಹಿಂದಿನ ಕಾರ್ಯಕ್ಕೆ ಭಟ್‌ಗೆ ಹಣ ಪಾವತಿಸಿರಲಿಲ್ಲ. 2013ರ ಅ.3ರಂದು ಹಣ ಪಾವತಿಸಲು ಸರಕಾರವು ನಿರ್ಣಯ ಕೈಗೊಂಡಿತ್ತು. ಸದ್ಯ ಸ್ತಂಭಗಳು ಬಣ್ಣ ಕಳೆದುಕೊಂಡಿದ್ದು, ಕೂಡಲೇ ಸ್ವರ್ಣ ಲೇಪನ ಕಾರ್ಯ ಮುಂದುವರಿಸಬೇಕಿದೆ. ಹೀಗಾಗಿ, ರಘುಪತಿ ಭಟ್ ವಿರುದ್ಧ ದಾಖಲಿಸಿರುವ ದೂರು ಹಿಂಪಡೆದು, ಅವರ ಮೂಲಕವೇ ಚಿನ್ನದ ಲೇಪನ ಕಾರ್ಯ ಮುಂದುವರಿಸಲು ಅಗತ್ಯ ಕ್ರಮ ಜುರುಗಿಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.







