ದೇಶದ ಡ್ರಗ್ಸ್ ಜಾಲದ ಹಿಂದೆ ವಿದೇಶಿ ಷಡ್ಯಂತ್ರ: ಕರಂದ್ಲಾಜೆ

ಉಡುಪಿ, ಸೆ.18: ದೇಶದಲ್ಲಿ ಇಂದು ಡ್ರಗ್ಸ್ ಜಾಲ ವ್ಯಾಪಕವಾಗಿ ಹರಡಿ ಕೊಂಡಿದ್ದು, ಇದರಲ್ಲಿ ವಿದೇಶಿ ಷಡ್ಯಂತ್ರವಿದೆ. ಭಾರತದ ಯುವಕರನ್ನು ಈ ಮೂಲಕ ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಆದುದರಿಂದ ಯುವಕರನ್ನು ಬಲಿ ತೆಗೆದುಕೊಳ್ಳುತ್ತಿರುವ ಡ್ರಗ್ಸ್‌ಗೆ ನಾವು ಕೊನೆ ಕಾಣಿಸಬೇಕಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಿದಿಯೂರು ಉದಯ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಕತ್ವ ದಲ್ಲಿ ಉಡುಪಿ ಸಂವೇದನಾ ಫೌಂಡೇಶನ್ ವತಿಯಿಂದ ಸೋಮವಾರ ಅಜ್ಜರ ಕಾಡು ಪುರಭವನದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಬೀದಿ ನಾಟಕ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಚೀನಾ ವಸ್ತುಗಳು ಇಂದು ಭಾರತದ ಮಾರುಕಟ್ಟೆಯನ್ನು ಸಂಪೂರ್ಣವಾಗಿ ವ್ಯಾಪಿಸಿದೆ. ದೇವರ ಕೋಣೆಯಿಂದ ಹಿಡಿದು ಕಾರ್ಖಾನೆಗಳವರೆಗೂ ಎಲ್ಲ ಕಡೆ ಚೀನಾ ವಸ್ತುಗಳನ್ನೇ ಬಳಸಲಾಗುತ್ತಿದೆ. ಇಡೀ ಜಗತ್ತಿನ ಆರ್ಥಿಕತೆಯನ್ನು ತನ್ನ ಕಪಿಮುಷ್ಠಿಗೆ ತರುವ ಪ್ರಯತ್ನ ಇದಾಗಿದೆ. ಇದೇ ರೀತಿ ಮುಂದುವರೆದರೆ ಭಾರತದ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿ ದೇಶದ ಆರ್ಥಿಕತೆ ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇತರ ಮಾಧ್ಯಮಗಳ ಪ್ರಭಾವಗಳಿಂದಾಗಿ ಇಂದು ಬೀದಿ ನಾಟಕಗಳು ಮರೆ ಯಾಗುತ್ತಿವೆ. ಕೆಳಹಂತದ ಜನರನ್ನು ತಲುಪುವ ಬೀದಿ ನಾಟಕವನ್ನು ಹೆಚ್ಚು ಪ್ರಚಾರ ಪಡಿಸುವ ಕೆಲಸ ಆಗಬೇಕು. ಬೀದಿ ನಾಟಕ ಮಾಡುವವರ ಸಂಖ್ಯೆ ಕಡಿಮೆಯಾಗಿದೆಯೇ ಹೊರತು ನೋಡುಗರದಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ತೀರ್ಪುಗಾರ ಬಾಸುಮ ಕೊಡಗು, ಶ್ಯಾಮಲಾ ಕುಂದರ್, ಆನಂದ ಮಡಿವಾಳ, ಗಂಗಾಧರ ಆಚಾರ್ಯ, ಫೌಂಡೇಶನ್‌ನ ಉಪಾಧ್ಯಕ್ಷ ರವಿ ಆಚಾರ್ಯ ಉಪಸ್ಥಿತರಿದ್ದರು.
ಟ್ರಸ್ಟ್‌ನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಧಾಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಕಳ ಕಾಲೇಜಿಗೆ ಪ್ರಶಸ್ತಿ
ಚೀನಾ ವಸ್ತುಗಳ ಬಳಕೆ- ಭಾರತದ ಆರ್ಥಿಕತೆಗೆ ಸಾವಿನ ಕುಣಿಕೆ, ಇರುವು ದೊಂದೇ ಭೂಮಿ, ಡ್ರಗ್ಸ್ ಕಪಿಮುಷ್ಠಿಯಲ್ಲಿ ಕಾಲೇಜು ಎಂಬ ಮೂರು ವಿಷಯಗಳ ಮೇಲೆ ಏರ್ಪಡಿಸಲಾದ ಬೀದಿನಾಟಕ ಸ್ಪರ್ಧೆಯಲ್ಲಿ ಕಾರ್ಕಳ ಮಂಜುನಾಥ ಪೈ ಮೆಮೋರಿಯಲ್ ಕಾಲೇಜು ಪ್ರಥಮ, ಶಿರ್ವ ಸೈಂಟ್ ಮೇರಿಸ್ ಕಾಲೇಜು ದ್ವಿತೀಯ ಹಾಗೂ ಉಡುಪಿ ಎಂಜಿಎಂ ಕಾಲೇಜು ತಂಡಗಳು ತೃತೀಯ ಬಹುಮಾನ ಪಡೆದುಕೊಂಡವು.







