ಎಚ್‌ಎಎಲ್‌ನ ಹೆಲಿಕಾಪ್ಟರ್ ತಯಾರಿಕಾ ಘಟಕದ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್

ಬೆಂಗಳೂರು, ಸೆ.17: ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಕೇಂದ್ರ ಸರಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೊನಾಟಿಕಲ್ ಲಿಮಿಟೆಡ್‌ನ (ಎಚ್‌ಎಎಲ್) ಹೆಲಿಕಾಪ್ಟರ್ ತಯಾರಿಕಾ ಘಟಕದ ಕಾಮಗಾರಿಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ಸೋಮವಾರ ನಿರಾಕರಿಸಿದೆ.
ಹೆಲಿಕಾಪ್ಟರ್ ತಯಾರಿಕಾ ಘಟಕ ಸ್ಥಾಪನೆಗಾಗಿ ನಡೆದಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ತುಮಕೂರಿನ ಕಾರೇಹಳ್ಳಿ ಗ್ರಾಮದ ದಾಸಪ್ಪ ಸೇರಿದಂತೆ 34 ಮಂದಿ ರೈತರು ಹಾಗೂ ಭೂಮಾಲಕರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರಿದ್ದ ಪೀಠ, ಮಧ್ಯಂತರ ಆದೇಶ ನೀಡಲು ನಿರಾಕರಿಸಿತು.
ಈಗಾಗಲೇ ಜಮೀನನ್ನು ಎಚ್‌ಎಎಲ್ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಲಾಗಿರುವ ಈ ತಕರಾರು ಅರ್ಜಿಯಲ್ಲಿ ಅಂತಿಮ ಆದೇಶ ಅರ್ಜಿದಾರರ ಪರವಾಗಿಯೇ ಬಂದರೂ, ವಶಪಡಿಸಿಕೊಂಡಿರುವ ಭೂಮಿಗೆ ಪ್ರತಿಯಾಗಿ ಪರಿಹಾರ ಧನ ಅಥವಾ ಪರ್ಯಾಯ ಜಮೀನು ಕಲ್ಪಿಸಲಷ್ಟೇ ಸಾಧ್ಯ. ಹೀಗಾಗಿ ಹೆಲಿಕಾಪ್ಟರ್ ತಯಾರಿಕಾ ಘಟಕ ನಿರ್ಮಾಣ ಕಾಮಗಾರಿಗೆ ತಡೆ ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ಅರ್ಜಿದಾರರ ಮಧ್ಯಂತರ ಮನವಿಯನ್ನು ತಳ್ಳಿಹಾಕಿತು.







