ನಾಗರಿಕತೆ ಹೆಸರಲ್ಲಿ ಮಂಗಗಳ ಸ್ಥಳಾಂತರ: ಹೈಕೋರ್ಟ್

ಹೊಸದಿಲ್ಲಿ, ಸೆ. 18: ನಾಗರಿಕತೆ ಹೆಸರಲ್ಲಿ ಮೂಲನಿವಾಸಿಗಳಾದ ಮಂಗಗಳನ್ನು ಮಾನವರು ಸ್ಥಳಾಂತರಗೊಳಿಸಿದರು ಎಂದು ಸೋಮವಾರ ಹೇಳಿರುವ ದಿಲ್ಲಿ ಉಚ್ಚ ನ್ಯಾಯಾಲಯ, ಈ ಮಂಗಗಳು ಆಹಾರಕ್ಕಾಗಿ ಕಸದ ತೊಟ್ಟಿಗಳನ್ನು ಹುಡುಕುವುದು ನೋವಿನ ವಿಚಾರ ಎಂದಿದೆ.
ಕಾರ್ಯಕಾರಿ ಮುಖ್ಯ ನ್ಯಾಯಮೂತಿ ಗೀತಾ ಮಿತ್ತಲ್ ಹಾಗೂ ನ್ಯಾಯಮೂರ್ತಿ ಸಿ. ಹರಿ ಶಂಕರ್ ಅವರನ್ನೊಳಗೊಂಡ ಪೀಠ, ಈ ಪ್ರಾಣಿಗಳಿಗೆ ಗೌರವ ನೀಡುವ ಹಾಗೂ ವಾಸಿಸಲು ಅವಕಾಶ ನೀಡುವ ಅಗತ್ಯವಿದೆ ಎಂದಿದೆ.
ಮಂಗಗಳನ್ನು ಹಿಡಿಯುವವರ ಕೊರತೆ ಹಾಗೂ ಇದು ದಿಲ್ಲಿ ಸರಕಾರದ ವನ್ಯಜೀವಿ ಇಲಾಖೆಯ ಕರ್ತವ್ಯವಾದುದರಿಂದ ಮಂಗಗಳನ್ನು ಹಿಡಿಯಲು ಹಾಗೂ ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ ಎಂದು ದಕ್ಷಿಣ ದಿಲ್ಲಿ ಮುನ್ಸಿಪಲ್ ಸಮಿತಿ ನ್ಯಾಯಾಲಯಕ್ಕೆ ತಿಳಿಸಿತು. ಇದನ್ನು ಪರಿಶೀಲಿಸಿದ ನ್ಯಾಯಾಲಯ ಅಡಳಿತ ಮಂಗಗಳಿಗೆ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿತು.
ಮಂಗಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆ ಆಗುತ್ತಿದೆ. ಆದರೆ, ಅವುಗಳಿಗೆ ವಾಸಿಸಲು ಸ್ಥಳವಿಲ್ಲ ಹಾಗೂ ಸಮರ್ಪಕವಾಗಿ ಆಹಾರ ಸಿಗುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.





