ಸಮುದ್ರದಲ್ಲಿ ತೈಲ ಹರಡುವಿಕೆಯ ಸ್ವಚ್ಛತೆಗಾಗಿ ಕೇರಳದ ವಿಜ್ಞಾನಿಗಳಿಂದ ನೂತನ ಆವಿಷ್ಕಾರ

ಹೊಸದಿಲ್ಲಿ,ಸೆ.18: ಐಐಎಸ್‌ಇಆರ್-ಕೇರಳದ ವಿಜ್ಞಾನಿಗಳು ಕಟ್ಟಿಗೆಯ ತಿರುಳಿನಿಂದ ಮಾಡಿದ ಮಾರ್ಬಲ್ ಗಾತ್ರದ ಚೆಂಡುಗಳನ್ನು ಬಳಸಿ ಸಮುದ್ರದಲ್ಲಿ ಹರಡಿದ ತೈಲವನ್ನು ಸ್ವಚ್ಛಗೊಳಿಸುವ ಅಗ್ಗದ ಮತ್ತು ಪರಿಣಾಮಕಾರಿ ಮಾರ್ಗವನ್ನು ಆವಿಷ್ಕರಿಸಿದ್ದಾರೆ.
ಹಡಗುಗಳು ಅವಘಡಕ್ಕೊಳಗಾದಾಗ ಸಮುದ್ರದಲ್ಲಿ ತೈಲ ಹರಡುವಿಕೆಯು ವಿಶ್ವದಲ್ಲಿಯ ಸಾಮಾನ್ಯ ವಿಪತ್ಕಾರಿ ಸಮಸ್ಯೆಯಾಗಿದ್ದು, ತೈಲವು ಸುದೀರ್ಘ ಕಾಲ ಸಮುದ್ರದ ನೀರಿನಲ್ಲಿ ತೇಲುತ್ತಿರುವುದರಿಂದ ಆರ್ಥಿಕತೆ ಮತ್ತು ಪರಿಸರದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಜೊತೆಗೆ ಸಸ್ಯ ಮತ್ತು ಪ್ರಾಣಿ ಸಂಕುಲದ ಮೇಲೆಯೂ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ.
ಮಿತವ್ಯಯಕಾರಿ ವಿಧಾನದಲ್ಲಿ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ತುರ್ತು ಅಗತ್ಯವಿದೆ ಎನ್ನುವುದನ್ನು ನಾವು ಮನಗಂಡಿದ್ದೆವು ಮತ್ತು ಸಮುದ್ರದ ನೀರನ್ನು ಸ್ವಚ್ಛಗೊಳಿಸುವ ಜೊತೆಗೆ ತೈಲವನ್ನು ಮರಳಿ ಸಂಗ್ರಹಿಸುವ ವಿಧಾನದ ಬಗ್ಗೆ ನಾವು ಸಂಶೋಧನೆ ಕೈಗೊಂಡಿದ್ದೆವು ಎಂದು ಐಐಎಸ್‌ಇಆರ್-ಕೇರಳದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಕಾನಾ ಎಂ.ಸುರೇಶನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ತೈಲ ಹರಡಿದ ಪ್ರದೇಶದಲ್ಲಿ ಬೆಂಕಿ ಹಾಕುವುದು ಸೇರಿದಂತೆ ಈಗ ಅನುಸರಿಸುತ್ತಿರುವ ವಿಧಾನಗಳು ಪರಿಣಾಮಮಕಾರಿಯಾಗಿ ತೈಲವನ್ನು ಸ್ವಚ್ಛಗೊಳಿಸುವುದಿಲ್ಲ. ಅಲ್ಲದೆ ಹರಡಿರುವ ತೈಲವನ್ನು ಮರಳಿ ಸಂಗ್ರಹಿಸಲೂ ಈ ವಿಧಾನಗಳಿಂದ ಸಾಧ್ಯವಿಲ್ಲ ಎಂದು ಹೇಳಿದ ಸುರೇಶನ್, ನಾವು ಸೆಲ್ಯುಲೋಸ್‌ನ ಸಣ್ಣ ಚೆಂಡುಗಳನ್ನು ತಯಾರಿಸಿ ಬಳಿಕ ಅದನ್ನು ಜಿಲೇಟರ್ ದ್ರಾವಣದಲ್ಲಿ ಅದ್ದಿ ಸ್ವಚ್ಛತಾ ಕಾರ್ಯಕ್ಕೆ ಬಳಸಿದ್ದು, ಈ ವಿಧಾನವು ತುಂಬ ಯಶಸ್ವಿಯಾಗಿದೆ ಎಂದರು.







