ಕೋಲಾರದ ಜನತೆ ಸಿದ್ಧರಾಮಯ್ಯ ಪರ ಶಕ್ತಿ ಪ್ರದರ್ಶಿಸಲಿ : ಶಾಸಕ ವರ್ತೂರು ಪ್ರಕಾಶ್

ಕೋಲಾರ, ಸೆ.18: ಜಿಲ್ಲೆಗೆ ಅಭಿವೃದ್ಧಿ ಕಾಮಗಾರಿಗಳ ಸುರಿಮಳೆಗೈದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೋಲಾರ ವಿಧಾನಸಭೆ ಕ್ಷೇತ್ರದ ಜನತೆ ಗೌರವ ಪೂರ್ವಕವಾಗಿ ಸ್ವಾಗತಿಸಿ ಶಕ್ತಿ ಪ್ರದರ್ಶಿಸಬೇಕೆಂದು ಶಾಸಕ ವರ್ತೂರು ಪ್ರಕಾಶ್ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಜಿಲ್ಲೆಗೆ ಸೆ.20 ರಂದು ಆಗಮಿಸುತ್ತಿರುವ ಹಿನ್ನಲೆಯಲ್ಲಿ ತಮ್ಮ ನಿವಾಸದ ಬಳಿ ಬೃಹತ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಅಸ್ತಿತ್ವ ಮತ್ತು ಗೌರವವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾಪಾಡಿದ್ದಾರೆ.ಸಿದ್ಧರಾಮಯ್ಯ ರಾಜಕಾರಣವನ್ನು ನಾನು ಗ್ರಾಪಂ ಸದಸ್ಯನಾದಗಿನಿಂದಲೂ ಬಲ್ಲೆ. ಸ್ವಾಭಿಮಾನ, ಶುದ್ಧ ಆಡಳಿತಗಾರರು, ಅಮಿಷಕ್ಕೆ ಒಳಗಾಗದೆ ಆಡಳಿತ ನಡೆಸಿದ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಇಂತಹ ವ್ಯಕ್ತಿಯನ್ನು ನಾವು ಗೌರವಿಸುವುದು ಕರ್ತವ್ಯವಾಗಿದೆ ಎಂದರು.
ಕೋಲಾರಕ್ಕೆ ಕೆ.ಸಿ.ವ್ಯಾಲಿ, ವಿಶ್ವವಿದ್ಯಾಲಯ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ರಸ್ತೆ, ಕುಡಿಯುವ ನೀರಿನ ಅಭಿವೃದ್ಧಿಗಾಗಿ ವಿಶೇಷ ಅನುದಾನಗಳನ್ನು ಬಿಡುಗಡೆ ಮಾಡುವ ಮೂಲಕ ಶಾಶ್ವತ ಕೊಡುಗೆಗಳನ್ನು ನೀಡಿದ್ದಾರೆ. ರಾಜ್ಯದ ಬಡ ಜನರ ಹಸಿವನ್ನು ನೀಗಿಸುವ ಸಲುವಾಗಿ ಹಸಿವು ಮುಕ್ತ ಕರ್ನಾಟಕ ಯೋಜನೆಯನ್ನು ಜಾರಿಗೆ ತಂದು ಬಡವರಿಗೆ ಆಹಾರ ಭದ್ರತೆಯನ್ನು ಕಲ್ಪಿಸಿದ್ದಾರೆ. ಸ್ವಾಭಿಮಾನದ ಪ್ರತೀಕವಾದ ಸಿದ್ಧರಾಮಯ್ಯನವರು ರಾಜ್ಯದ ಜನತೆಯ ಕಷ್ಟ ಸುಖಗಳನ್ನು ಅರಿತು ನಡೆದುಕೊಂಡಿದ್ದಾರೆ. ರೈತರ ವಿಚಾರದಲ್ಲಿ ಜವಾಬ್ದಾರಿಯಿಂದ ವರ್ತಿಸಿರುವ ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಇದು ಸರಕಾರಿ ಕಾರ್ಯಕ್ರಮವಾಗಿರುವುದರಿಂದ ಸರಿಯಾದ ಸಮಯಕ್ಕೆ ಜನತೆ ಬರಬೇಕು. ಅಪ್ಪಿ ತಪ್ಪಿಯೂ ಯಾರು ವೇದಿಕೆ ಬಳಿ ಸುಳಿಯಬಾರದು. ಸ್ವತಂತ್ರ ಶಾಸಕನಾಗಿರುವುದರಿಂದ ನಾವು ಬೇರೆಯಾಗಿ ಕಾರ್ಯಕ್ರಮಕ್ಕೆ ತೆರಳಬೇಕು. ಕೋಲಾರ ವಿಧಾನಸಭಾ ಕ್ಷೇತ್ರದಿಂದ ಬರುವ ಜನರನ್ನು ಸಿಎಂ ಅವರು ನೋಡಬೇಕು ಎಂದು ಅವರು ವಿವರಿಸಿದರು.
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ವರ್ತೂರು ಪ್ರಕಾಶ್ ಅವರು ಮತ ನೀಡಿದ್ದರ ಪರಿಣಾಮ ಕೋಲಾರ ವಿಧಾನಸಭೆ ಕ್ಷೇತ್ರಕ್ಕೆ ವಿಶೇಷ ಅನುದಾನಗಳನ್ನು ಬಿಡುಗಡೆ ಮಾಡಿದ್ದಾರೆ. ಇಂತಹ ಮುಖ್ಯಮಂತ್ರಿಯನ್ನು ಗೌರವಿಸುವುದು ಬಹು ಮುಖ್ಯವಾಗಿರುವುದರಿಂದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.







