ಅತ್ತೆ, ಮಾವನ ಕೊಲೆಯತ್ನ: ಆರೋಪಿ ಸೊಸೆ ಬಂಧನ
ಮಲ್ಪೆ, ಸೆ.18: ತೆಂಕನಿಡಿಯೂರು ಗ್ರಾಮದ ಲಕ್ಷ್ಮಿನಗರ ಎಂಬಲ್ಲಿ ಸೆ.13 ರಂದು ಅತ್ತೆ, ಮಾವನಿಗೆ ಚಿತ್ರಹಿಂಸೆ ನೀಡಿ ಕೊಲೆಗೆ ಯತ್ನಿಸಿದ ಆರೋಪಿ ಸೊಸೆ ಅಶ್ವಿನಿ ಪೈ(32) ಎಂಬಾಕೆಯನ್ನು ಮಲ್ಪೆ ಪೊಲೀಸರು ಇಂದು ಬಂಧಿಸಿದ್ದಾರೆ.
ಮೂಲತಃ ಇಂದ್ರಾಳಿಯ ವೆಂಕಟೇಶ್ ಪೈ(68) ಹಾಗೂ ಅವರ ಪತ್ನಿ ವೀಣಾ ಪೈ(65) ಎಂಬವರು ಲಕ್ಷ್ಮಿನಗರದಲ್ಲಿರುವ ಹಿರಿಯ ಮಗ ಲಕ್ಷ್ಮಣ ಪೈ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮನೆಯಲ್ಲಿದ್ದ ಅತ್ತೆ, ಮಾವನಿಗೆ ಲಕ್ಷ್ಮಣ್ ಪೈಯ ಪತ್ನಿ ಅಶ್ವಿನಿ ಪೈ ಸುಟ್ಟುಗ ಬಿಸಿ ಮಾಡಿ ಮೈಮೇಲೆ ಬರೆ ಎಳೆದು ಚಿತ್ರ ಹಿಂಸೆ ನೀಡಿ ಕೊಲೆಗೆ ಯತ್ನಿಸಿದ್ದಾರೆಂದು ದೂರಲಾಗಿದೆ.
ಗಾಯಗೊಂಡ ವೃದ್ಧ ದಂಪತಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಶ್ವಿನಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.
ಘಟನೆಯ ಬಳಿಕ ನಾಪತ್ತೆಯಾಗಿದ್ದ ಅಶ್ವಿನಿ ಪೈಯನ್ನು ಬಂಧಿಸಿರುವ ಮಲ್ಪೆ ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ಸೆ.28ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.





