ದಾವಣಗೆರೆ : ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಧರಣಿ

ದಾವಣಗೆರೆ,ಸೆ.18:ನಗರದ ಹಳೇಭಾಗಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ನಾಗರಿಕ ಮೂಲಸೌಕರ್ಯ ಹೋರಾಟ ವೇದಿಕೆಯ ನೇತೃತ್ವದಲ್ಲಿ ಸ್ಥಳೀಯ ನಾಗರೀಕರು ರಸ್ತೆ ತಡೆ ನಡೆಸಿದರು.
ನಗರದ ಮಾಗನಹಳ್ಳಿ ರಸ್ತೆಯ ಹೆಗಡೆ ನಗರದಲ್ಲಿ ರಸ್ತೆ ತಡೆ ಮಾಡಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ, ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿದರು.
ಈ ಸಂದರ್ಭ ವೇದಿಕೆಯ ಸಂಚಾಲಕ ಜೆ.ಅಮಾನುಲ್ಲಾಖಾನ್ ಮಾತನಾಡಿ, ದಾವಣಗೆರೆಯ ಹಳೇ ಭಾಗವನ್ನು ಸಂಪೂರ್ಣ ಕಡೆಗಣಿಸಲಾಗುತ್ತಿದೆ. ಅಭಿವೃದ್ಧಿ ಕೇವಲ ಉತ್ತರ ಭಾಗಕ್ಕೆ ಮಾತ್ರ ಸೀಮಿತವಾಗಿದೆ. ನಗರದ ಹೊಸ ರಿಂಗ್ ರಸ್ತೆಯ ನಿವೇಶನದಲ್ಲಿ ಕಳೆದ 35 ವರ್ಷಗಳಿಂದಲೂ ನಿವಾಸಿಗಳು ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಜೀವನ ನಡೆಸುತ್ತಾ ಬಂದಿದ್ದಾರೆ. ಆದರೂ, ಯಾರೊಬ್ಬರೂ ಈವರೆಗೆ ಇತ್ತ ಕಣ್ಣು ಹಾಯಿಸಿಲ್ಲ. ಯಾಕೆ ಈ ತಾರತಮ್ಯ ನೀತಿ? ಎಂದು ಅವರು ಪ್ರಶ್ನಿಸಿದರು.
ಗುಡಿಸಲು ಮುಕ್ತ ರಾಜ್ಯ ಮಾಡುತ್ತೇವೆ ಹಾಗೂ ಸಂವಿಧಾನದ ಆಶಯದಂತೆ ಸರ್ವರಿಗೂ ಸೂರು ನೀಡುತ್ತೇವೆ ಎನ್ನುವ ಜನಪ್ರತಿನಿಧಿಗಳು ಈವರೆಗೂ ಇತ್ತ ಗಮನಹರಿಸದಿರುವುದು ದುರಂತವೇ ಸರಿ. ಪ್ರತಿ ಚುನಾವಣೆಯ ಸಮಯದಲ್ಲೂ ಇಲ್ಲಿನ ನಿವಾಸಿಗಳಿಗೆ ಆಶ್ವಾಸನೆ ನೀಡುತ್ತಾ ಜನಪ್ರತಿನಿಧಿಗಳು ಮತಗಳನ್ನು ಪಡೆಯುತ್ತಾ ಬಂದಿದ್ದಾರೆ. ಆದರೆ, ನಂತರದ ದಿನಗಳಲ್ಲಿ ನಮ್ಮ ಸಮಸ್ಯೆಗಳನ್ನು ಆಲಿಸುವುದಿಲ್ಲ. ಇಲ್ಲಿನ ಮುಗ್ದ ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಹಳೇ ಭಾಗಕ್ಕೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿ ಈಗಾಗಲೇ ಮಹಾನಗರ ಪಾಲಿಕೆ, ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ, ಈವರೆಗೆ ನಮ್ಮ ಹೋರಾಟಕ್ಕೆ, ಮನವಿಗೆ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಶೀಘ್ರವೇ ಹಳೇ ಭಾಗಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಹಳೇ ಭಾಗಕ್ಕೆ ಸೂಕ್ತ ಮೂಲಭೂತ ಸೇವೆಗಳನ್ನು ಶೀಘ್ರವೇ ಒದಗಿಸಬೇಕು. ಈ ಕುರಿತು ಜಿಲ್ಲಾಡಳಿತ, ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಿದರೆ, ಮುಂದಿನ ದಿನಗಳಲ್ಲಿ ನಮ್ಮ ಹಕ್ಕಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದ ಅವರು, ಈ ಕೂಡಲೇ ಇತ್ತ ಗಮನಹರಿಸಿ ಮೂಲಭೂತ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹುಸೇನ್ ಪೀರ್, ಮಹಮದ್ ಬಾಷಾ, ಹಸೇನ್ ಸಾಬ್, ಬಶೀರ್ ಅಹಮದ್, ಖಾದರ್ ಬಾಷಾ, ಸೈಯದ್ ರಸುಲ್ ಸಾಬ್, ಸುಲೇಮಾನ್ ಸೇರಿದಂತೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.







