ಚನ್ನಗಿರಿ : ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು
ಚನ್ನಗಿರಿ,ಸೆ.18:ವಿದ್ಯಾರ್ಥಿನಿಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಮಾಯಕೊಂಡ ವಾಸಿ ರಂಗಪ್ಪ ಎಂಬುವರ ಮಗಳಾದ ಐಶ್ವರ್ಯ ಮೃತ ವಿದ್ಯಾರ್ಥಿನಿ. ಬಸವಾಪಟ್ಟಣ ಬಳಿಯ ಕಾರಿಗನೂರು ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಐಶ್ವರ್ಯ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.
ಸೆ.12ರಂದು ಐಶ್ವರ್ಯ ಅನಾರೋಗ್ಯದಿಂದ ಬಳಲುತ್ತಿರುವ ಬಗ್ಗೆ ವಸತಿ ಶಾಲೆಯಿಂದ ದೂರವಾಣಿ ಕರೆ ಬಂದ ಹಿನ್ನಲೆ ಸೆ. 13ಕ್ಕೆ ಈಕೆಯ ತಂದೆ ರಂಗಪ್ಪ ಶಾಲೆಗೆ ಹೋದಾಗ ಐಶ್ವರ್ಯ ಕಾಲು ಊದಿಕೊಂಡಿತ್ತು. ಆಗ ತಕ್ಷಣವೇ ಈಕೆಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಸೆ.16ಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಐಶ್ವರ್ಯ ಮೃತಪಟ್ಟಿದ್ದಾಳೆ.
ತನ್ನ ಮಗಳ ಸಾವಿನ ಬಗ್ಗೆ ಅನುಮಾನವಿರುವುದಾಗಿ ಐಶ್ವರ್ಯ ತಂದೆ ರಂಗಪ್ಪ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.





