ಕೈ ಮಗ್ಗ ಉತ್ಪನ್ನಗಳ ಮೇಲಿನ ಜಿ.ಎಸ್.ಟಿ. ರದ್ದಿಗೆ ಒತ್ತಾಯ

ತುಮಕೂರು.ಸೆ.18:ಕೈ ಉತ್ಪನ್ನಗಳ ಮೇಲೆ ವಿಧಿಸಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ವ್ಯವಸ್ಥೆಯನ್ನು ವಿರೋಧಿಸಿ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರು,ಸಾಹಿತಿಗಳು,ಚಳುವಳಿಗಾರರು,ಕಲಾವಿದರು, ರಂಗ ಕರ್ಮಿಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ವಿದ್ಯಾರ್ಥಿ ಯುವಜನರು ಸತ್ಯಾಗ್ರಹವನ್ನು ನಡೆಸಿದರು.
ನಗರದ ಎಂ.ಜಿ.ರಸ್ತೆಯಲ್ಲಿರುವ ಬಾಲಭವನದ ಮುಂಭಾಗ ನಡೆದ ಚಳುವಳಿಯನ್ನು ಉದ್ದೇಶಿಸಿ ಮಾತನಾಡಿದ ರಂಗಕರ್ಮಿ ಪ್ರಸನ್ನ,ತುಮಕೂರಿನಲ್ಲಿ ಕರ ನಿರಾಕರಣೆ ಸತ್ಯಾಗ್ರಹ ನಡೆದಿದೆ.ಸರಕಾರಗಳು ಬಡವರ ಉತ್ಪನ್ನಗಳ ಮೇಲೆ ಜಿಎಸ್‍ಟಿ ತೆರಿಗೆ ವಿಧಿಸಿದೆ.ಸಣ್ಣ ವ್ಯಾಪಾರಿಗಳು ತಳ್ಳುವಗಾಡಿ ವ್ಯಾಪಾರಿಗಳು, ರೈತರು, ನೇಕಾರರು, ಕಂಬಾರರು, ಕುಂಬಾರರು ಹಾಗೂ ಎಲ್ಲಾ ಶ್ರಮಿಕರ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿದೆ.
ಕಾರುಗಳು, ಸಿಗರೇಟು, ವಿಸ್ಕಿಗಳ ಬೆಲೆ ಕಡಿಮೆಯಾಗಿದೆ. ಖಾದಿ ಬಟ್ಟೆ, ರೈತರ ಆಹಾರ ಪದಾರ್ಥಗಳು, ಚಮ್ಮಾರ ಮಾಡಿದ ಚಪ್ಪಲಿ ದುಬಾರಿಯಾಗಿದೆ. ತೆರಿಗೆ ನೀತಿಯಿಂದ ಹೆಚ್ಚು ದುಬಾರಿಯಾದ ವಸ್ತುಗಳನ್ನು ಕೊಳ್ಳಲು ಮಾರುಕಟ್ಟೆಯಲ್ಲಿ ಜನ ಹಿಂದೇಟು ಹಾಕುತ್ತಾರೆ. ಮೊದಲೇ ಬೀದಿಗೆ ಬಿದ್ದಿರುವ ಬಡವರನ್ನು ಜಿಎಸ್‍ಟಿ ಇನ್ನಷ್ಟು ಬೀದಿಗೆಳೆಯುತ್ತಿದೆ. ಬಡವರ ಮೇಲೆ ವಿಧಿಸಿರುವ ಜಿಎಸ್‍ಟಿ ಕರವನ್ನು ಕೂಡಲೇ ರದ್ದುಗೊಳಿಸಿ, ಶೂನ್ಯಕರವನ್ನು ವಿಧಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ಕರ ಕೊಡದೆ ನಿಮ್ಮ ಸಂತೆ ಬೀದಿಗಳಲ್ಲಿ ಶ್ರಮಿಕರ ಉತ್ಪನ್ನಗಳನ್ನು ಮಾರಾಟ ಮಾಡಿಕೊಳ್ಳಿ ಎಂದು ಹೇಳುವ ಸರಕಾರಗಳು ಅರ್ಥ ಮಾಡಿಕೊಳ್ಳಬೇಕಿದೆ.ಬಡವರ ಉತ್ಪನ್ನಗಳು ಕೇವಲ ತನ್ನ ಊರಿನ ಸಂತೆಗಳಲ್ಲಿ ಮಾತ್ರ ಅಲ್ಲ, ದೊಡ್ಡ ದೊಡ್ಡ ನಗರಗಳಲ್ಲಿ ಮಾರಾಟ ಆಗಬೇಕಿದೆ.ಬಡವರ ಸಹಕಾರ ಸಂಘಗಳ ಮೂಲಕ ಬ್ರಾಂಡೆಡ್ ಪದಾರ್ಥಗಳಾಗಿ ಮಾರಾಟ ವಾಗಬೇಕು.ಇದಕ್ಕೆ ಸರಕಾರ ವ್ಯವಸ್ಥೆ ಮಾಡಿಕೊಡಬೇಕು.ಬಡವರು ಕೃಷಿ ಉತ್ಪನ್ನಗಳನ್ನು ತಯಾರಿಸಬೇಕು, ಶ್ರೀಮಂತರು ಇದರಿಂದ ಲಾಭ ಪಡೆದುಕೊಳ್ಳುವ ಜಿಎಸ್‍ಟಿ ತೆರಿಗೆಯನ್ನು ನಾವು ವಿರೋಧಿಸುತ್ತೇವೆ. ಬಡವರ ಉತ್ಪನ್ನ ಮತ್ತು ಅವರÀ ಶ್ರಮಕ್ಕೆ ಸೂಕ್ತವಾದ ಪ್ರತಿಫಲ ಸಿಗಬೇಕೆಂಬ ಉದ್ದೇಶದಿಂದಲೇ ಈ ಸತ್ಯಾಗ್ರಹ ನಡೆಯುತ್ತದೆ ಎಂದರು.
ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ. ಯತಿರಾಜು ಮಾತನಾಡಿ,ಯಂತ್ರ ಬಳಸದ ಕೈಕಸುಬಿನ ಉತ್ಪನ್ನಗಳು ಜಿಎಸ್‍ಟಿ ತೆರಿಗೆಯಿಂದ ಇನ್ನೂ ಬೆಲೆ ದುಪ್ಪಟ್ಟಾಗುತ್ತಿದೆ. ಇದರಿಂದ ಬಡವರ ವಹಿವಾಟಿನ ಮೇಲೆ ಭಾರಿ ಹೊಡೆತ ಬಿದ್ದಿದೆ.
ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಬ್ರಾಂಡ್ ಮಾಡಿ ಮಾರಾಟ ಮಾಡಿದರೆ ಅವುಗಳ ಮೇಲೆ ಈ ತೆರಿಗೆ ನೀತಿ ಬಳಸಲಾಗುತ್ತದೆ.ಗ್ರಾಮೀಣ ಉತ್ಪನ್ನಗಳಿಗೆ ಹೊಡೆತ ಬೀಳುತ್ತಿರುವ ಈ ತೆರಿಗೆ ನೀತಿಯನ್ನು ವಿರೋಧಿಸಿ, ಗ್ರಾಮೀಣ ಉತ್ಪನ್ನಗಳನ್ನು ಶೂನ್ಯ ಕರದ ವ್ಯಾಪ್ತಿಗೆ ತರುವಂತೆ ಒತ್ತಾಯಿಸಿದರು.
ದೇಶದಲ್ಲಿ ನೋಟು ಅಮಾನ್ಯೀಕರಣ ಆದ ಮೇಲೆ ಒಂದು ದೇಶ ಒಂದೇ ತೆರಿಗೆ ಘೊಷಣೆ ಎಂದು ಹೇಳುತ್ತಾ, ಜಿಎಸ್‍ಟಿ ಮೂಲಕ ಬಡವರನ್ನು ಶೋಷಣೆ ಮಾಡುತ್ತಿವೆ. ಇಂತಹ ಶ್ರಮ ವಿರೋಧಿ ನೀತಿಯನ್ನು ಸರಕಾರ ಕೂಡಲೆ ಕೈಬಿಡಬೇಕೆಂದು ಒತ್ತಾಯಿಸಿದರು. ಜನಸಾಮಾನ್ಯರು ಬಳಸುವ ಆಹಾರೋತ್ಪನ್ನಗಳ ಮೇಲಿನ ತೆರಿಗೆ ನೀತಿ ಅವೈಜ್ಞಾನಿಕವಾಗಿದೆ. ಇದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಪಿಯುಸಿಎಲ್‍ನ ದೊರೈರಾಜು,ಜನಸಂಗ್ರಾಮ ಪರಿಷತ್ತಿನ ಜವಹರ್ ಪಚಿಡಿತ್,ವಿಜ್ಞಾನ ಕೇಂದ್ರದ ರಾಮಕೃಷ್ಣಪ್ಪ ಮಾತನಾಡಿದರು.ಸಿಜ್ಞಾ ಯುವ ಸಂವಾದ ಕೇಂದ್ರದ ಯುವಜನರು ಹೋರಾಟ ಗೀತೆಗಳನ್ನಾಡಿದರು.
ಸಿಜ್ಞಾ ಯುವ ಸಂವಾದ ಕೇಂದ್ರದ ಜ್ಞಾನ ಸಿಂಧೂ ಸ್ವಾಮಿ,ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಸ್ವಾತಂತ್ರ ಹೋರಾಟಗಾರರಾದ ರೇವಣ್ಣ, ತುಂಡೋಟಿ ನರಸಿಂಹಯ್ಯ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.







