ಕೋಲ್ಕತಾಕ್ಕೆ ಆಗಮಿಸಿದ ಟೀಮ್ ಇಂಡಿಯಾ, ಆಸ್ಟ್ರೇಲಿಯ

ಕೋಲ್ಕತಾ, ಸೆ.18: ಭಾರತ ಮತ್ತು ಆಸ್ಟ್ರೇಲಿಯ ತಂಡಗಳು ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಸೋಮವಾರ ಕೋಲ್ಕತಾ ತಲುಪಿವೆ. ಎರಡನೆ ಏಕದಿನ ಅಂತರಾಷ್ಟ್ರೀಯ ಪಂದ್ಯ ಗುರುವಾರ ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಚೆನ್ನೈನಲ್ಲಿ ಮಳೆಬಾಧಿತ ಮೊದಲ ಪಂದ್ಯದಲ್ಲಿ 26 ರನ್‌ಗಳ ಭರ್ಜರಿ ಜಯ ಗಳಿಸಿರುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಆಟಗಾರರು ಹೆಚ್ಚು ಖುಷಿಯಲ್ಲಿದ್ದಾರೆ.
ಟೀಮ್ ಇಂಡಿಯಾದ ಸದಸ್ಯರು ವಿಮಾನ ನಿಲ್ದಾಣದಿಂದ ನೇರವಾಗಿ ತಮಗೆ ನಿಗದಿಯಾಗಿರುವ ಹೋಟೆಲ್‌ಗೆ ತೆರಳಿದ್ದಾರೆ.ಕೋಚ್ ರವಿ ಶಾಸ್ತ್ರಿ ಮತ್ತು ಸಹಾಯಕ ಸಿಬ್ಬಂದಿ ತಂಡದೊಂದಿಗೆ ಇದ್ದರು. ಉಭಯ ತಂಡದ ಸದಸ್ಯರು ಮಧ್ಯಾಹ್ನ 3:30ರ ಹೊತ್ತಿಗೆ ಬಾಡಿಗೆ ವಿಮಾನದಲ್ಲಿ ಕೋಲ್ಕತಾ ತಲುಪಿದರು.
‘‘ ಸೋಮವಾರ ಅಭ್ಯಾಸ ನಿಗದಿಯಾಗಿಲ್ಲ. ಇದರಿಂದಾಗಿ ಆಟಗಾರರು ವಿಶ್ರಾಂತಿ ಪಡೆಯಲಿದ್ದಾರೆ’’ ಎಂದು ಟೀಮ್ ಇಂಡಿಯಾದ ಸ್ಥಳೀಯ ಮ್ಯಾನೇಜರ್ ತಿಳಿಸಿದ್ದಾರೆ.
ಚೆನ್ನೈನಲ್ಲಿ ರವಿವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ 22 ಓವರ್‌ಗಳಲ್ಲಿ 85ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಉಪಯುಕ್ತ ಬ್ಯಾಟಿಂಗ್ ನೆರವಿನಲ್ಲಿ ತಂಡ ಚೇತರಿಸಿಕೊಂಡು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 281 ರನ್ ಗಳಿಸಿತ್ತು.
ಎಂ.ಎಸ್. ಧೋನಿ 79ರನ್ (88 ಎಸೆತ) ಮತ್ತು ಹಾರ್ದಿಕ್ ಪಾಂಡ್ಯ 83 ರನ್ (66 ಎಸೆತ) ಗಳಿಸಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು.
ಗ್ಲೆನ್ ಮ್ಯಾಕ್ಸ್‌ವೆಲ್ 18 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಲ್ಲಿ 39 ರನ್ ಗಳಿಸಿ ಆಸ್ಟ್ರೇಲಿಯಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಕುಲ್‌ದೀಪ್ ಯಾದವ್ ಓವರ್‌ನಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿ ಭಾರತಕ್ಕೆ ಆತಂಕ ಮೂಡಿಸಿದ್ದರು. ಆದರೆ ಬಳಿಕ ಅವರ ಬ್ಯಾಟಿಂಗ್‌ಗೆ ಚಾಹಲ್ ಕಡಿವಾಣ ಹಾಕಿದ್ದರು. ಸರಣಿಯ ಉಳಿದ ಮೂರು ಏಕದಿನ ಪಂದ್ಯಗಳು ಇಂದೋರ್, ಬೆಂಗಳೂರು ಮತ್ತು ನಾಗ್ಪುರದಲ್ಲಿ ನಡೆಯಲಿವೆ. ರಾಂಚಿ, ಗುವಾಹಟಿ ಮತ್ತು ಹೈದರಾಬಾದ್‌ನಲ್ಲಿ ಟ್ವೆಂಟಿ-20 ಪಂದ್ಯಗಳು ನಡೆಯಲಿವೆ.
ಏರ್‌ಪೋರ್ಟ್ ನೆಲದಲ್ಲಿ ಮಲಗಿ ಸರಳತೆ ಮೆರೆದ ಧೋನಿ!
ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನದು ಸರಳ ವ್ಯಕ್ತಿತ್ವ ಎನ್ನುವುದನ್ನು ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ. ಭಾರತದ ನಾಯಕನಾಗಿದ್ದಾಗ ‘ಕ್ಯಾಪ್ಟನ್ ಕೂಲ್’ ಎಂದೇ ಖ್ಯಾತಿ ಪಡೆದಿದ್ದ ಧೋನಿ ಸೋಮವಾರ ಮೈದಾನದ ಒಳಗೆ ಮಾತ್ರವಲ್ಲ ಹೊರಗಡೆಯೂ ತಾನು ‘ಕೂಲ್ ವ್ಯಕ್ತಿ’ಎಂದು ತೋರಿಸಿಕೊಟ್ಟಿದ್ದಾರೆ.
ಭಾರತ ಕ್ರಿಕೆಟ್ ತಂಡ ಚೆನ್ನೈನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯವನ್ನು ಜಯಿಸಿದ ಬಳಿಕ ದ್ವಿತೀಯ ಏಕದಿನ ಪಂದ್ಯವನ್ನಾಡಲು ಕೋಲ್ಕತಾಗೆ ತೆರಳಲು ಸೋಮವಾರ ಚೆನ್ನೈ ಏರ್‌ಪೋರ್ಟ್‌ಗೆ ತೆರಳಿತ್ತು. ಏರ್‌ಪೋರ್ಟ್‌ನಲ್ಲಿ ಧೋನಿ ನೆಲದ ಮೇಲೆ ಮಲಗಿಕೊಂಡು ವಿಶ್ರಾಂತಿ ಪಡೆದರೆ, ಸಹ ಆಟಗಾರರು ಧೋನಿಯನ್ನು ಅನುಕರಿಸಿ ಅವರ ಸುತ್ತಲೂ ಕುಳಿತುಕೊಂಡರು.
ಧೋನಿ ಅವರೊಂದಿಗೆ ನೆಲದ ಮೇಲೆ ಕುಳಿತುಕೊಂಡ ಚಿತ್ರವನ್ನು ಟ್ವೀಟರ್‌ನಲ್ಲಿ ಹಾಕಿದ ರಾಹುಲ್, ‘‘ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದ ಬಳಿಕ ಆಟಗಾರರು ಹೇಗೆ ನಿರಾಳರಾಗಿದ್ದಾರೆ ನೋಡಿ’’ಎಂದು ಟ್ವೀಟ್ ಮಾಡಿದ್ದಾರೆ.
ಶ್ರೀಲಂಕಾ ಪ್ರವಾಸದ ವೇಳೆ ಶ್ರೀಲಂಕಾದ ಪ್ರೇಕ್ಷಕರು ಮೈದಾನದತ್ತ ನೀರಿನ ಬಾಟಲ್‌ಗಳನ್ನು ಎಸೆದು ಪಂದ್ಯಕ್ಕೆ ಅಡ್ಡಿಪಡಿಸಿದಾಗ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಮೈದಾನದಲ್ಲೇ ಮಲಗಿ ಏನೂ ನಡೆದಿಲ್ಲ ಎನ್ನುವಂತೆ ವರ್ತಿಸಿದ್ದರು.
ಮೊದಲ ಏಕದಿನ ಪಂದ್ಯದ ಹೆಲೆಟ್ಸ್
►ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶೇ. 80 ಗೆಲುವು ದಾಖಲಿಸಿದ ಮೊದಲ ನಾಯಕ.
►ಭಾರತ ಚೆನ್ನೈನ ಚಿಪಾಕ್ ಸ್ಟೇಡಿಯಂನಲ್ಲಿ 30 ವರ್ಷಗಳ ಬಳಿಕ ಗೆಲುವು ದಾಖಲಿಸಿದೆ. 1987, ಅ.9ರಂದು ಇದೇ ಕ್ರೀಡಾಂಗಣದಲ್ಲಿ ಭಾರತ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ 1 ರನ್ ಅಂತರದಲ್ಲಿ ಸೋಲು ಅನುಭವಿಸಿತ್ತು.
►ಧೋನಿ ಆಸ್ಟ್ರೇಲಿಯ ವಿರುದ್ಧ 7ನೆ ಮತ್ತು ಏಕದಿನ ಕ್ರಿಕೆಟ್‌ನಲ್ಲಿ 66ನೆ ಅರ್ಧಶತಕ ದಾಖಲಿಸಿದ್ದಾರೆ.
►ಹಾರ್ದಿಕ್ ಪಾಂಡ್ಯ (83) ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ್ದಾರೆ. ಕಳೆದ ಜೂನ್ 18ರಂದು ಓವಲ್‌ನಲ್ಲಿ ಪಾಂಡ್ಯ ಪಾಕಿಸ್ತಾನ ವಿರುದ್ಧ 76 ರನ್ ದಾಖಲಿಸಿದ್ದರು.
►ಪಾಂಡ್ಯ 75ಕ್ಕೂ ಅಧಿಕ ರನ್ ದಾಖಲಿಸಿ ಎರಡು ವಿಕೆಟ್ ಉಡಾಯಿಸಿದ ಭಾರತದ ಮೂರನೆ ಆಲ್‌ರೌಂಡರ್.
►ಪಾಂಡ್ಯ ಎರಡನೆ ಬಾರಿ ಪಂದ್ಯದಲ್ಲಿ ಅರ್ಧಶತಕ ಮತ್ತು 2 ವಿಕೆಟ್‌ಗಳನ್ನು ಪಡೆದಿದ್ದಾರೆ.
►ಪಾಂಡ್ಯ 17 ಇನಿಂಗ್ಸ್‌ಗಳಲ್ಲಿ 32 ಸಿಕ್ಸರ್ ಸಿಡಿಸಿದ್ದಾರೆ. ಇದು ಭಾರತದ ದಾಂಡಿಗ ಈ ವರ್ಷ ದಾಖಲಿಸಿರುವ ಗರಿಷ್ಠ ಸಿಕ್ಸರ್ ಸಾಧನೆ.
►ಪಾಂಡ್ಯ ಅವರು ಝಾಂಪ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಮೂರನೆ ಬಾರಿ ಮತ್ತು ಟೆಸ್ಟ್ ನಲ್ಲಿ ಒಂದು ಬಾರಿ ಈ ಸಾಧನೆ ಮಾಡಿದ್ದಾರೆ.
►ವಿರಾಟ್ ಕೊಹ್ಲಿ ನಾಯಕರಾದ ಬಳಿಕ ಎರಡನೆ ಬಾರಿ ಶೂನ್ಯ ಸಂಪಾದಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 12ನೆ ಬಾರಿ ಖಾತೆ ತೆರೆಯದೆ ನಿರ್ಗಮಿಸಿದ್ದಾರೆ.







