ಫಿಫಾ ಅಂಡರ್-17 ವಿಶ್ವಕಪ್: ಕ್ರೀಡಾ ಸರಕುಗಳಿಗೆ ಆಮದು ಸುಂಕ ವಿನಾಯಿತಿ
.jpg)
ಹೊಸದಿಲ್ಲಿ, ಸೆ.18: ಭಾರತದಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ಫಿಫಾ ಅಂಡರ್-17 ವಿಶ್ವಕಪ್‌ನ ಕ್ರೀಡಾ ಪರಿಕರಗಳು ಹಾಗೂ ಇತರ ಎಲ್ಲ ವಸ್ತುಗಳ ಮೇಲಿನ ಆಮದು ಸುಂಕಕ್ಕೆ ವಿನಾಯಿತಿ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.
ಇದೇ ಮೊದಲ ಬಾರಿ ಭಾರತದಲ್ಲಿ ನಡೆಯಲಿರುವ ಅಂಡರ್-17 ಫುಟ್ಬಾಲ್ ವಿಶ್ವಕಪ್ ಟೂರ್ನಿಯು ಅ.6 ರಿಂದ ಆರಂಭವಾಗಿ 28ರ ತನಕ ಆರು ನಗರಗಳಲ್ಲಿ ನಡೆಯಲಿದೆ. ಒಟ್ಟು 52 ಪಂದ್ಯಗಳು ನಡೆಯಲಿದ್ದು, ಫೈನಲ್ ಫುಟ್ಬಾಲ್ ಪಂದ್ಯವು ಕೋಲ್ಕತಾದ ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ಅ.28 ರಂದು ನಡೆಯಲಿದೆ.
‘‘ಎಲ್ಲ ಕ್ರೀಡಾ ಸರಕುಗಳು, ಕ್ರೀಡಾ ಸಾಧನಗಳು ಹಾಗೂ ಕ್ರೀಡಾ ಅವಶ್ಯಕತೆಗಳು: ಫಿಟ್‌ನೆಸ್ ಸಲಕರಣೆಗಳು, ತಂಡದ ಸಮವಸ್ತ್ರಗಳು/ಬಟ್ಟೆೆಗಳು, ಸಲಕರಣೆಯ ಬಿಡಿಭಾಗಗಳು, ಎಲ್ಲ ಉಪಭೋಗ್ಯಗಳ ಮೇಲೆ ಕೆಲವು ಷರತ್ತುಗಳನ್ನು ವಿಧಿಸಿ ಆಮದು ಸುಂಕದಿಂದ ವಿನಾಯಿತಿ ನೀಡಲಾಗುವುದು’’ ಎಂದು ಅಬಕಾರಿ ಹಾಗೂ ಸುಂಕದ ಕೇಂದ್ರ ಮಂಡಳಿ(ಸಿಬಿಇಸಿ) ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.
ಡೋಪಿಂಗ್ ನಿಯಂತ್ರಣ ಸಲಕರಣೆಗಳು, ಪ್ರಥಮ ಚಿಕಿತ್ಸೆಯ ಕಿಟ್ಸ್, ಉಪಗ್ರಹ ಫೋನ್‌ಗಳು/ಜಿಪಿಎಸ್, ಡೈನಿಂಗ್/ಕಿಚನ್ ವಸ್ತುಗಳು ಆಮದು ಸುಂಕದಿಂದ ವಿನಾಯಿತಿ ಪಡೆದ ಪಟ್ಟಿಯಲ್ಲಿವೆ.
ಆತಿಥೇಯ ಭಾರತ ಸಹಿತ ಒಟ್ಟು 24 ದೇಶಗಳು ಹೊಸದಿಲ್ಲಿ, ಮಾರ್ಗೊವಾ, ಕೊಚ್ಚಿ, ಗುವಾಹಟಿ, ಕೋಲ್ಕತಾ ಹಾಗೂ ನವಿ ಮುಂಬೈನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಗಳಲ್ಲಿ ಸೆಣಸಾಡಲಿವೆ.







