ಕುಡಿದು ವಾಹನ ಚಾಲನೆ: ರೂನಿಗೆ 2 ವರ್ಷ ಡ್ರೈವಿಂಗ್ ನಿಷೇಧ

ಲಂಡನ್, ಸೆ.18: ಇಂಗ್ಲೆಂಡ್‌ನ ಮಾಜಿ ಫುಟ್ಬಾಲ್ ನಾಯಕ ವೇಯ್ನಾ ರೂನಿ ಬ್ರಿಟಿಷ್ ನ್ಯಾಯಾಲಯದಲ್ಲಿ ತಾನು ಕುಡಿದು ವಾಹನ ಚಾಲನೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಎರಡು ವರ್ಷಗಳ ಡ್ರೈವಿಂಗ್ ನಿಷೇಧಕ್ಕೆ ಒಳಗಾಗಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ವಾಯುವ್ಯ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿರುವ ಸ್ಟಾಕ್‌ಪೋರ್ಟ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಎದುರು ಸೋಮವಾರ ಹಾಜರಾದ ರೂನಿ ತಪ್ಪೊಪ್ಪಿಕೊಂಡಿದ್ದಾರೆ.
31ರ ಹರೆಯದ ರೂನಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಪ್ರಮಾಣದ ಆಲ್ಕೋಹಾಲ್ ಸೇವಿಸಿ ವಾಹನ ಚಾಲನ ಮಾಡಿರುವ ತಪ್ಪಿಗೆ ಸೆ.1 ರಂದು ಬಂಧಿಸಲ್ಪಟ್ಟಿದ್ದರು. ಸೋಮವಾರ ಕಪ್ಪು ಕೋಟು ಧರಿಸಿ ನ್ಯಾಯಾಲಯಕ್ಕೆ ಹಾಜರಾಗಿರುವ ರೂನಿ, ತೀರ್ಪಿನ ಬಳಿಕ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿರುವುದಕ್ಕೆ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ್ದಾರೆ.
ರೂನಿ ಆಗಸ್ಟ್‌ನಲ್ಲಿ ದಿಢೀರನೆ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿಯಾಗಿದ್ದರು. 14 ವರ್ಷಗಳ ಕಾಲ ಇಂಗ್ಲೆಂಡ್‌ನ್ನು ಪ್ರತಿನಿಧಿಸಿದ್ದ ರೂನಿ ಒಟ್ಟು 53 ಗೋಲುಗಳನ್ನು ಬಾರಿಸಿ ದೇಶದ ಪರ ಅಗ್ರ ಸ್ಕೋರ್ ಗಳಿಸಿದ್ದರು.





