ತನ್ನ ಅಭಿಮಾನಿಗೆ ಚೆನ್ನೈ ಪಂದ್ಯ ವೀಕ್ಷಿಸಲು ನೆರವಾದ ಅಶ್ವಿನ್

ಚೆನ್ನೈ, ಸೆ.18: ಚೆನ್ನೈನ ಆಫ್-ಸ್ಪಿನ್ನರ್ ಆರ್.ಅಶ್ವಿನ್ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಿದ್ದರೂ ತನ್ನ ಕಟ್ಟಾ ಅಭಿಮಾನಿ ಪಿ.ವೆಂಕಟೇಶನ್‌ಗೆ ಭಾರತ-ಆಸ್ಟ್ರೇಲಿಯ ನಡುವಿನ ಮೊದಲ ಏಕದಿನ ಪಂದ್ಯ ವೀಕ್ಷಿಸಲು ಟಿಕೆಟ್ ಒದಗಿಸಿಕೊಟ್ಟಿದ್ದಾರೆ. ಅಶ್ವಿನ್‌ರ ಕ್ರಿಕೆಟ್ ಅಭಿಮಾನಿ ವೆಂಕಟೇಶನ್ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು, ನವೆಂಬರ್‌ನಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
‘‘ನಾನು ಈತನಕ ಗ್ಯಾಲರಿಗಳಲ್ಲಿ ನಿಂತು ಕ್ರಿಕೆಟ್‌ನ್ನು ವೀಕ್ಷಿಸಿದ್ದೆ. ಅಶ್ವಿನ್‌ರ ಮ್ಯಾನೇಜ್‌ಮೆಂಟ್ ತಂಡದ ಪ್ರಯತ್ನದಿಂದಾಗಿ ನನಗೆ ಅತಿಥಿಗಳು ಕುಳಿತುಕೊಂಡು ವೀಕ್ಷಿಸುವ ಸ್ಥಳದಲ್ಲಿ ಪಂದ್ಯ ವೀಕ್ಷಿಸುವ ಅವಕಾಶ ಲಭಿಸಿತ್ತು. ಅಶ್ವಿನ್‌ರ ನೆರವನ್ನು ನಾನು ಜೀವನಪರ್ಯಂತ ಮರೆಯಲಾರೆ’’ ಎಂದು ವೆಂಕಟೇಶನ್ ಹೇಳಿದ್ದಾರೆ. ವೆಂಕಟೇಶನ್ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ಎಲ್ಲ ಪಂದ್ಯಗಳನ್ನು ವೀಕ್ಷಿಸಿದ್ದಾರೆೆ. ಆಸ್ಟ್ರೇಲಿಯ ವಿರುದ್ಧ ಏಕದಿನ ಪಂದ್ಯದಲ್ಲಿ ಅಶ್ವಿನ್ ಅನುಪಸ್ಥಿತಿಯು ಅವರಿಗೆ ಬೇಸರವಾಗಿದೆ. ಆದರೆ, ಭಾರತ ಗೆಲುವು ಸಾಧಿಸಿರುವುದಕ್ಕೆ ಸಂತೋಷಗೊಂಡಿದ್ದಾರೆ.





