ಸರಕಾರಿ ಗೌರವಗಳೊಂದಿಗೆ ಖಮರುಲ್ ಇಸ್ಲಾಮ್ ಅಂತ್ಯಕ್ರಿಯೆ

ಕಲಬುರಗಿ, ಸೆ.19: ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಡಾ.ಖಮರುಲ್ ಇಸ್ಲಾಮ್(69) ಅಂತ್ಯಕ್ರಿಯೆಯನ್ನು ಅಪಾರ ಬಂಧು, ಬಳಗ ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಕಲಬುರಗಿ ಜಿಲ್ಲಾ ನ್ಯಾಯಾಲಯದ ಹಿಂಭಾಗದಲ್ಲಿರುವ ಖಲಂದರ್ ಖಾನ್ ಖಬರಸ್ಥಾನ್‌ನಲ್ಲಿ ಮಂಗಳವಾರ ಸಂಜೆ ನೆರವೇರಿಸಲಾಯಿತು.
ಸೋಮವಾರ ಬೆಳಗ್ಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಮೃತಪಟ್ಟ ಖಮರುಲ್ ಇಸ್ಲಾಮ್‌ರ ಪಾರ್ಥಿವ ಶರೀರವನ್ನು ಹೊತ್ತ ವಾಹನವು ಮಂಗಳವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕಲಬುರಗಿಯ ನೊಬೆಲ್ ಶಾಲೆ ಬಳಿಯಿರುವ ನಿವಾಸ ತಲುಪಿತು. ಈ ವೇಳೆ ಮನೆ ಬಳಿ ಸೇರಿದ್ದ ಸಂಬಂಧಿಕರು, ಕಾಂಗ್ರೆಸ್ ಕಾರ್ಯಕರ್ತರು, ಹಿತೈಷಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಮನೆಯಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದ ಬಳಿಕ ಪಾರ್ಥಿವ ಶರೀರವನ್ನು ವಿಶೇಷ ವಾಹನದಲ್ಲಿ ಎಂ.ಎಸ್.ಕೆ.ಮಿಲ್, ಜಿಲಾನಾಬಾದ್, ಆಳಂದ ಚೆಕ್‌ಪೋಸ್ಟ್, ಹುಮನಾಬಾದ್ ವರ್ತುಲ ರಸ್ತೆ ಮಾರ್ಗವಾಗಿ ಮುಸ್ಲಿಮ್ ಚೌಕ್‌ನಲ್ಲಿರುವ ಕೆಸಿಟಿ ಕಾಲೇಜು ಮೈದಾನಕ್ಕೆ ತಂದು ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಸಾರ್ವಜನಿಕರು ಅಂತಿಮ ದರ್ಶನ ಪಡೆಯಲು ಇರಿಸಲಾಯಿತು.
ಕೆಸಿಟಿ ಮೈದಾನದಲ್ಲಿ ಸೇರಿದ್ದ ಜನಸಾಗರವು ಅಗಲಿದ ನಾಯಕನ ಪಾರ್ಥಿವ ಶರೀರವನ್ನು ಹೊತ್ತು ಆಗಮಿಸಿದ ವಾಹನವನ್ನು ನೋಡುತ್ತಿದ್ದಂತೆ ಭಾವೋದ್ವೇಗಕ್ಕೆ ಒಳಗಾದರು. ಮೈದಾನದ ತುಂಬೆಲ್ಲಾ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಸರದಿ ಸಾಲಿನಲ್ಲಿ ನಿಂತು ಸಾರ್ವಜನಿಕರು ಖಮರುಲ್ ಇಸ್ಲಾಮ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಕೆಸಿಟಿ ಮೈದಾನದಲ್ಲೇ ಪಾರ್ಥಿವ ಶರೀರಕ್ಕೆ ಸಕಲ ಸರಕಾರಿ ಗೌರವಗಳನ್ನು ಸಲ್ಲಿಸಿದ ಬಳಿಕ ನಮಾಝೆ ಜನಾಝವನ್ನು ನೆರವೇರಿಸಲಾಯಿತು. ಆನಂತರ, ಖಮರುಲ್ ಇಸ್ಲಾಮ್‌ರ ಇಚ್ಛೆಯಂತೆ ಕಲಬುರಗಿ ಜಿಲ್ಲಾ ನ್ಯಾಯಾಲಯದ ಹಿಂಭಾಗದಲ್ಲಿರುವ ಖಲಂದರ್ ಖಾನ್ ಖಬರಸ್ಥಾನ್‌ನಲ್ಲಿ ಅವರ ಪಾರ್ಥಿವ ಶರೀರವನ್ನು ದಫನ್ ಮಾಡಲಾಯಿತು.
ಖಮರುಲ್ ಇಸ್ಲಾಂ ಅವರ ತಂದೆ, ತಾಯಿ, ಸಹೋದರ ಸೇರಿದಂತೆ ಹಲವು ಮಂದಿ ಕುಟುಂಬ ಸದಸ್ಯರನ್ನು ಇದೇ ಖಬರ್ ಸ್ಥಾನ್‌ನಲ್ಲಿ ದಫನ್ ಮಾಡಲಾಗಿದೆ. ಕಳೆದ ಒಂದು ವರ್ಷದ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಖಮರುಲ್ ಇಸ್ಲಾಮ್, ತನ್ನ ನಿಧನದ ನಂತರ ಇಲ್ಲೆ ನನ್ನನ್ನು ದಫನ್ ಮಾಡಬೇಕು ಎಂದು ಹೇಳಿದ್ದರಂತೆ. ಅದರಂತೆ, ಈ ಖಬರ್ ಸ್ಥಾನ್‌ನಲ್ಲಿರುವ ತಾಯಿ ಹಾಗೂ ಸಹೋದರನ ಸಮಾಧಿ ಪಕ್ಕದಲ್ಲೇ ಇವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸ್ವಯಂ ಘೋಷಿತ ಬಂದ್: ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಖಮರುಲ್ ಇಸ್ಲಾಮ್, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದರು. ಖಮರುಲ್ ಇಸ್ಲಾಮ್ ನಿಧನದ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿ ಜನರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವರಾದ ಯು.ಟಿ.ಖಾದರ್, ಡಾ.ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಶಾಸಕ ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಇನ್ನಿತರರು ಖಮರುಲ್ ಇಸ್ಲಾಮ್ ಅವರ ದತ್ತು ಪುತ್ರ ಫಿರೋಝ್ ಉಲ್ ಇಸ್ಲಾಮ್ ಸೇರಿದಂತೆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.







