ಯಶಸ್ಸಿಗೆ ಕಾರಣರಾದ ಶಿಕ್ಷಕರಿಗೆ ಚಿರಋಣಿ: ರಾಮಲಿಂಗಾರೆಡ್ಡಿ
.jpg)
ಬೆಂಗಳೂರು, ಸೆ.14: ಶಿಕ್ಷಣ ಎಂಬುದು ಪ್ರತಿಯೊಬ್ಬರ ಯಶಸ್ಸಿಗೆ ಬೇಕಾದ ಪ್ರಮುಖವಾದ ಸಾಧನವಾಗಿದೆ. ಹೀಗಾಗಿ ತಮ್ಮ ಜೀವನದ ಯಶಸ್ಸಿಗೆ ಕಾರಣರಾದ ಶಿಕ್ಷಕರಿಗೆ ಸದಾ ಚಿರಋಣಿಯಾಗಿರಬೇಕು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಿಸಿದರು.
ಎನ್.ಎ.ಹ್ಯಾರಿಸ್ ಫೌಂಡೇಶನ್ ವತಿಯಿಂದ ನಗರದ ಬಿಷಪ್ ಕಾಟನ್ಸ್ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಕರು ತಮ್ಮದೇ ಆದ ಪಾತ್ರವನ್ನು ವಹಿಸಿರುತ್ತಾರೆ. ಅಂತಹ ಶಿಕ್ಷಕರನ್ನು ನೆನೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಶಾಸಕ ಹ್ಯಾರಿಸ್ ಮಾತನಾಡಿ, ಸಮಾಜದ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಗಣನೀಯವಾಗಿದೆ. ಶಿಕ್ಷಕ-ವಿದ್ಯಾರ್ಥಿಗಳ ನಡುವಿನ ಸಂಬಂಧ ಅನ್ಯೋನ್ಯವಾಗಿದ್ದರೆ ವಿನೂತನ ಸಂಶೋಧನೆ, ಹೊಸತನವನ್ನು ಮೂಡಿಸಬಹುದು. ವಿದ್ಯಾರ್ಥಿಗಳ ಬದುಕನ್ನು ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು.
ತಂತ್ರಜ್ಞಾನದ ಅಭಿವೃದ್ಧಿಯ ಈ ಕಾಲದಲ್ಲಿ ಶಿಕ್ಷಕರು ತಮ್ಮ ಜ್ಞಾನವನ್ನು ಉತ್ತಮಪಡಿಸಿಕೊಳ್ಳಬೇಕು. ಪ್ರತಿ ನಿತ್ಯ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳನ್ನು ಸರಿಯಾಗಿ ಗ್ರಹಿಸಿ ವಿದ್ಯಾರ್ಥಿಗಳ ಕುತೂಹಲ ಪೂರಿತ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳನ್ನು ನೀಡುವಂತಿರಬೇಕು ಎಂದು ಅವರು ಆಶಿಸಿದರು.
ಈ ವೇಳೆ ಹಿರಿಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕನ್ನಡ ಶಾಲೆಯ ಶಿಕ್ಷಕ ಶಿವಕುಮಾರ್‌ರಿಗೆ ಒಂದು ಲಕ್ಷ ರೂ.ಬಹುಮಾನವಾಗಿ ನೀಡಲಾಯಿತು. ಆದರೆ, ಶಿಕ್ಷಕ ಶಿವಕುಮಾರ್ ಇದೇ ಹಣವನ್ನು ಶಾಲೆಯ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊಡುಗೆಯಾಗಿ ನೀಡಿದರು.







