“ಭಾರತವನ್ನು ಪ್ರೀತಿಸುವ ನಾವು ಯಾಕಾಗಿ ದೇಶದ ವಿರುದ್ಧವಿರುವ ಶಕ್ತಿಗಳ ಜೊತೆ ಸೇರಬೇಕು?”
ದಿಲ್ಲಿ ಕಾಂಚನ್ ಕುಂಜ್ ನಲ್ಲಿ ಆಶ್ರಯ ಪಡೆದಿರುವ ರೊಹಿಂಗ್ಯನ್ನರ ಪ್ರಶ್ನೆ

ಹೊಸದಿಲ್ಲಿ, ಸೆ.19: “ಮ್ಯಾನ್ಮಾರ್ ಅಥವಾ ಬಾಂಗ್ಲಾದೇಶಕ್ಕೆ ಹೋಗುವ ಬದಲಾಗಿ ನಾವು ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಕನಿಷ್ಠ ಪಕ್ಷ ಇಲ್ಲಿ ನಮಗೆ ಸಮಾಧಿಯಾದರೂ ಇದೆ” ಎಂದು ಹೇಳುತ್ತಾರೆ 25 ವರ್ಷದ ಸೊಹೈಲ್ ಖಾನ್.
2012ರಿಂದ ದಿಲ್ಲಿಯ ಕಾಂಚನ್ ಕುಂಜ್ ನಲ್ಲಿ ಆಶ್ರಯ ಪಡೆದಿರುವ ರೊಹಿಂಗ್ಯಾ ನಿರಾಶ್ರಿತರಲ್ಲಿ ಸೊಹೈಲ್ ಖಾನ್ ಕೂಡ ಒಬ್ಬರು.
ಭಾರತದಿಂದ ರೊಹಿಂಗ್ಯನ್ನರನ್ನು ಗಡೀಪಾರು ಮಾಡಬೇಕು ಎಂಬ ವಿಚಾರದಲ್ಲಿ ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟಿಗೆ ಅಫಿದಾವಿತ್ ಸಲ್ಲಿಸಿದೆ.
“ಈ ಮಕ್ಕಳನ್ನು ನೋಡಿ, ಅವರು ಭಯೋತ್ಪಾದಕರಂತೆ ಕಾಣಿಸುತ್ತಾರೆಯೇ?, ನಾವು ಭಾರತವನ್ನು ಪ್ರೀತಿಸುತ್ತೇವೆ. ಶಾಂತಿ ಎಂದರೇನು, ಜೀವನವೆಂದರೇನು, ನಗು ಎಂದರೇನೆಂದು ನಾವು ಇಲ್ಲಿಗೆ ಬಂದ ನಂತರ ಅರಿತೆವು. ನಾವು ಯಾಕಾಗಿ ಭಾರತದ ವಿರುದ್ಧವಿರುವ ಶಕ್ತಿಗಳ ಜೊತೆ ಸೇರಬೇಕು?” ಎಂದು ಪ್ರಶ್ನಿಸುತ್ತಾರೆ ಜಾಫರ್. ಅವರು ಓಕ್ಲಾದಲ್ಲಿ ಆಫಿಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ.
2012ರಲ್ಲಿ ಈ ಕುಟುಂಬಗಳು ಮ್ಯಾನ್ಮಾರ್ ನಿಂದ ಬಾಂಗ್ಲಾದೇಶಕ್ಕೆ ಕಾರು ಹಾಗೂ ದೋಣಿಗಳ ಮೂಲಕ ತಲುಪಿತ್ತು. ಅಲ್ಲಿಂದ ಕೊಲ್ಕತ್ತಾ ಮುಖಾಂತರ ದಿಲ್ಲಿಗೆ ತಲುಪಿದ್ದರು. “ನಮ್ಮ ಬಳಿ ಯುಎನ್ ಎಚ್ಆರ್ ಸಿ ನಿರಾಶ್ರಿತರ ಕಾರ್ಡ್ ಗಳಿವೆ, ಕಳೆದ 2 ವಾರಗಳಿಂದ ಕಾಲನಿಯಲ್ಲಿರುವ ಕೆಲವರು ಕೆಲಸ ಕಳೆದುಕೊಂಡಿದ್ದಾರೆ. ನೀವು ಮ್ಯಾನ್ಮಾರ್ ನವರಾಗಿದ್ದು. ಗಡೀಪಾರು ಮಾಡಲಾಗುತ್ತದೆ ಎಂದು ಮಾಲಕರು ಅವರಲ್ಲಿ ಹೇಳಿದ್ದಾರೆ. ನಾವೇನು ಮನುಷ್ಯರಲ್ಲವೇ?” ಎಂದು ಪ್ರಶ್ನಿಸುತ್ತಾರೆ ಮುಹಮ್ಮದ್ ಸಲಾಮುಲ್ಲಾ.







