ನಾವಿಂದು ಹಿಂದೂ ಏಕಸಂಸ್ಕೃತಿಯಲ್ಲಿ ಕುಗ್ಗುತ್ತಿದ್ದೇವೆ: ಖ್ಯಾತ ಲೇಖಕಿ ನಯನತಾರಾ ಸೆಹಗಲ್

ಹೊಸದಿಲ್ಲಿ,ಸೆ.19: ಹೆಚ್ಚುತ್ತಿರುವ ಹಿಂಸೆ, ಗುಂಪುಗಳಿಂದ ಹತ್ಯೆಗಳು ಮತ್ತು ವಿಚಾರವಾದಿಗಳ ಧ್ವನಿ ಅಡಗಿಸುವಿಕೆಗೆ ದೇಶವು ಸಾಕ್ಷಿಯಾಗುತ್ತಿರುವ ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ನಯನಾತಾರಾ ಸೆಹಗಲ್ ಅವರು ಈ ದೇಶವು ಹಿಂದೂ ಏಕಸಂಸ್ಕೃತಿಯಲ್ಲಿ ಸಂಕುಚಿತಗೊಳ್ಳುತ್ತಿದೆ ಎಂದು ಅಭಿಪ್ರಾಯಿಸಿದ್ದಾರೆ.
ಹಿಂದೂ ಧರ್ಮವೆಂದು ಇಂದು ಬಿಂಬಿಸಲಾಗುತ್ತಿರುವುದು ನಿಜವಾದ ಹಿಂದೂ ಧರ್ಮದ ವಿಕಟಾನುಕರಣೆಯಾಗಿದೆ. ಹಿಂದುತ್ವವು ಹಿಂದು ಧರ್ಮದ ವಿಕೃತಗೊಂಡ ರೂಪವಾಗಿದ್ದು, ನಾವಿಂದು ಅದರಲ್ಲಿ ಸಂಕುಚಿತಗೊಳ್ಳುತ್ತಿದ್ದೇವೆ ಮತ್ತು ಇದೇ ಇಂದು ನಡೆಯುತ್ತಿದೆ ಎಂದು ಭಾರತೀಯ ಲೇಖಕರ ವೇದಿಕೆಯು ಏರ್ಪಡಿಸಿದ್ದ ಫೇಸ್‌ಬುಕ್ ಲೈವ್ ಚಾಟ್‌ನಲ್ಲಿ ಗೀತಾ ಹರಿಹರನ್ ಜೊತೆ ಸಂಭಾಷಿಸುತ್ತಿದ್ದ ಸೆಹಗಲ್ ಹೇಳಿದರು.
1947ರಲ್ಲಿ ದೇಶಕ್ಕೆ ಸ್ವಾತಂತ್ರ ದೊರಕಿದಾಗಿನಿಂದ ಈವರೆಗೆ ಬದಲಾಗುತ್ತಿರುವ ಕಾಲಗಳ ಬಗ್ಗೆ ಚರ್ಚಿಸಿದ ಅವರು, 1975ರಲ್ಲಿ ತುರ್ತುಸ್ಥಿತಿ ಹೇರಲ್ಪಟ್ಟಿದ್ದಾಗ ನಾವು ಸರ್ವಾಧಿಕಾರದ ಹಿಡಿತದಲ್ಲಿ ಸಿಲುಕಿದ್ದೇವೆ ಎನ್ನುವುದು ನಮಗೆ ಗೊತ್ತಿತ್ತು. ಆಗಿನ ಪರಿಸ್ಥಿತಿಯ ಅರಿವು ನಮಗಿತ್ತು. ಆದರೆ ಇಂದು ಪರಿಸ್ಥಿತಿಯು ಹೆಚ್ಚು ಅಪಾಯಕಾರಿ ಯಾಗಿದೆ. ಏಕೆಂದರೆ ಪ್ರಜಾಪ್ರಭುತ್ವದ ನೆರಳಿನಡಿ ಗುಂಪುಗಳಿಂದ ಹತ್ಯೆ, ಪತ್ರಕರ್ತರು ಮತ್ತು ವಿಚಾರವಾದಿಗಳ ಕೊಲೆಗಳು ನಡೆಯುತ್ತಿವೆ ಎಂದರು.
ಅಸಹಿಷ್ಣುತೆಯು ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯದ ವಿರುದ್ಧ ಹೆಚ್ಚುತ್ತಿದೆಯೇ ಹೊರತು ಇತರ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧವಲ್ಲ ಎಂದು ಬೆಟ್ಟು ಮಾಡಿದ ಅವರು, ಭಾರತವು ಕೇವಲ ಹಿಂದೂಗಳಿಗೆ ಸೇರಿದ ಭೂಮಿಯಾಗಿದೆ ಎನ್ನುವ ಪರಿಕಲ್ಪನೆ ಯನ್ನು ಹಿಂದುತ್ವವು ಪ್ರತಿಪಾದಿಸುತ್ತಿದೆ. ಮುಸ್ಲಿಮರು ತಮ್ಮ ಜಾಗವೆಲ್ಲಿದೆಯೋ ಅಲ್ಲಿಗೇ ತೆರಳಬೇಕು ಎನ್ನುವುದು ಅದರ ನಿಲುವಾಗಿದೆ ಎಂದರು.
ಇಷ್ಟೆಲ್ಲ ಹಿಂಸೆ ನಡೆಯುತ್ತಿದ್ದರೂ ಚಿತ್ರತಾರೆಯರು, ಬುದ್ಧಿಜೀವಿಗಳಿಂದ ದಲಿತರವರೆಗೆ ಸಮಾಜದ ವಿವಿಧ ಗುಂಪುಗಳಿಂದ ಪ್ರತಿಭಟನೆಗಳು ಹೆಚ್ಚುತ್ತಿವೆ ಎಂದು ಒತ್ತಿ ಹೇಳಿದ ಅವರು, ಇದು ಸಂಕಷ್ಟಕ್ಕೆ ಗುರಿಯಾಗಿರುವ ಜನರ ಪಾಲಿಗೆ ಆಶಾಕಿರಣವಾಗಿದ್ದು, ಅವರಿಗೆ ಧೈರ್ಯ ನೀಡುತ್ತಿದೆ ಎಂದರು.







