ರೈಲು ಬೋಗಿ ಮೇಲಿಂದ ಕಾಣೆಯಾಗಲಿದೆ ಕಾಗದದ ಪಟ್ಟಿ!

ಬೆಂಗಳೂರು, ಸೆ.19: ರೈಲು ಬೋಗಿಗಳ ಮೇಲೆ ಅಂಟಿಸುವ ಟಿಕೆಟ್ ಕಾಯ್ದಿರಿಸಿದವರ ಸೀಟ್, ಬರ್ತ್ ನಂಬರ್ ತಿಳಿಸುವ ಪಟ್ಟಿ ಶೀಘ್ರವೇ ಕಾಣೆಯಾಗಲಿದೆ. ಹೌದು, ಪಟ್ಟಿ ಅಂಟಿಸುವುದನ್ನು ಸ್ಥಗಿತಗೊಳಿಸಲು ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ತೆಗೆದುಕೊಂಡ ಕ್ರಮಗಳೇ ಇಲಾಖೆಗೆ ಮಾದರಿಯಾಗಿವೆ.
ಭಾರತೀಯ ರೈಲ್ವೆ ಪಟ್ಟಿ ಅಂಟಿಸುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಪ್ರಾಯೋಗಿಕವಾಗಿ ದೇಶದ 5 ನಿಲ್ದಾಣಗಳಲ್ಲಿ ಇದನ್ನು ಜಾರಿಗೆ ತರಲಾಗುತ್ತದೆ. ನಂತರ ಪ್ರಯಾಣಿಕರಿಂದ ಬರುವ ಪ್ರತಿಕ್ರಿಯೆ ನೋಡಿ ಎಲ್ಲ ನಿಲ್ದಾಣಗಳಲ್ಲಿ ಇದನ್ನು ಜಾರಿಗೊಳಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಕಾಗದಕ್ಕಾಗಿ ಖರ್ಚು ಮಾಡುತ್ತಿದ್ದ 60 ಲಕ್ಷ ರೂ.ಗಳನ್ನು ಉಳಿತಾಯ ಮಾಡುತ್ತಿದೆ. ಬೆಂಗಳೂರು ವಿಭಾಗ ನವೆಂಬರ್ 8, 2016ರಿಂದ ಬೆಂಗಳೂರಿನ ಸೆಂಟ್ರಲ್ ಮತ್ತು ಯಶವಂತಪುರ ನಿಲ್ದಾಣದಿಂದ ಹೊರಡುವ ಎಲ್ಲ ರೈಲುಗಳಿಗೆ ಪಟ್ಟಿ ಅಂಟಿಸುವುದನ್ನು ಸ್ಥಗಿತಗೊಳಿಸಿದೆ.
ಪಟ್ಟಿ ಅಂಟಿಸುವುದನ್ನು ಸ್ಥಗಿತಗೊಳಿಸಿದ ಬಳಿಕ ಬರ್ತ್ ಮತ್ತು ಸೀಟು ನಂಬರ್ ತಿಳಿಸುವುದು ಹೇಗೆ? ಎಂಬುದು ಸವಾಲಾಗಿತ್ತು. ಸೀಟು ಖಚಿತವಾಗಿದ್ದರೆ ಅವರಿಗೆ ಟಿಕೆಟ್‌ನಲ್ಲಿಯೇ ಬರ್ತ್ ನಂಬರ್ ಕೊಡಲಾಗುತ್ತದೆ. ವೈಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗೆ ಸೀಟು ಸಿಕ್ಕರೆ ಎಸ್‌ಎಂಎಸ್ ಮೂಲಕ ಬರ್, ಸೀಟ್ ನಂಬರ್ ಕಳಿಸಲಾಗುತ್ತಿದೆ.
ಪಿಎನ್‌ಆರ್ ನಂಬರ್ ನೀಡಿ ಸೀಟಿನ ಲಭ್ಯತೆ ಬಗ್ಗೆ ಮಾಹಿತಿ ಪಡೆಯುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಸೀಟು ಖಚಿತವಾದವರ ಪಟ್ಟಿಯನ್ನು ಈಗಾಗಲೇ ನಿಲ್ದಾಣದ ಡಿಜಿಟಲ್ ಬೋರ್ಡ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಹೀಗಾಗಿ, ಪ್ರಯಾಣಿಕರಿಗೆ ತೊಂದರೆ ಆಗುವುದಿಲ್ಲ ಎಂಬುದು ರೈಲ್ವೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಬೆಂಗಳೂರಿನಲ್ಲಿ ಯಶಸ್ವಿಯಾದ ಈ ಯೋಜನೆಯನ್ನು ಇತರ ನಿಲ್ದಾಣಗಳಿಗೆ ವಿಸ್ತರಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸುತ್ತಿದೆ.







