ಪ್ರತೀ ಟನ್ ಕಬ್ಬಿಗೆ 3 ಸಾವಿರ ರೂ. ವೈಜ್ಞಾನಿಕ ದರ ನಿಗದಿಗೊಳಿಸಿ: ಕುರುಬೂರು ಶಾಂತಕುಮಾರ್
ಮೈಸೂರು, ಸೆ.19: ಸಕ್ಕರೆ ಕಾರ್ಖಾನೆಗಳು ಆರಂಭವಾಗಿ ನಾಲ್ಕು ತಿಂಗಳು ಕಳೆದಿದ್ದರು ಕಬ್ಬಿನ ವೈಜ್ಞಾನಿಕ ದರ ನಿಗದಿಗೊಳಿಸದೆ ಮೀಣ ಮೇಷವೆಣಿಸುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿದ ರಾಜ್ಯ ರೈತ ಸಂಟನೆಗಳ ಒಕ್ಕೂಟವು, ಪ್ರತೀ ಟನ್ ಕಬ್ಬಿಗೆ 3 ಸಾವಿರ ರೂ. ವೈಜ್ಞಾನಿಕ ದರ ನಿಗದಿಗೊಳಿಸಬೇಕು ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಚುನಾವಣೆಗೆ ತೋರುವ ಆಸಕ್ತಿಯನ್ನು ರೈತ ಸಮಸ್ಯೆಗಳ ಪರಿಹಾರಕ್ಕೆ ತೋರುತ್ತಿಲ್ಲ, ಪ್ರಸಕ್ತ ಸಾಲಿನಲ್ಲಿ ಕಳೆದ ಜೂನ್ ನಿಂದಲೂ ಕಬ್ಬು ಅರೆಯಲು ಆರಂಭವಾಗಿದ್ದು ಇಂದಿಗೂ ವೈಜ್ಞಾನಿಕ ದರ ನಿಗದಿಗೊಳಿಸಲು ಸರ್ಕಾರ ವಿಳಂಭ ದೋರಣೆಯನ್ನು ಅನುಸರಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷದ ಎಸ್‍ಎಪಿ ದರ ನಿಗದಿಯಾಗದ ಕಾರಣ ರೈತರಿಗೆ ಕಳೆದ ವರ್ಷದ ಅಂತಿಮ ಕಂತಿನ 600 ಕೋಟಿ ರೂ. ಬಾಕಿ ಪಾವತಿಯಾಗಿಲ್ಲ. ಕಳೆದೆರಡು ವರ್ಷಗಳಿಂದ ಎಸ್‍ಎಪಿ ಜಾರಿಯಿದ್ದರು ಸಕ್ಕರೆ ಇಳುವರಿಯನ್ನು ಕಡಿಮೆ ತೋರಿಸಿ ರೈತರನ್ನು ವಂಚಿಸುತ್ತಿವೆ ಎಂದು ಕಾರ್ಖಾನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ವರಕೂಡು ಕೃಷ್ಣೇಗೌಡ, ಕನಕಪುರ ರವಿ ಹಾಜರಿದ್ದರು.





