ಅಕ್ರಮ ಕಲ್ಲುಗಣಿಗಾರಿಕೆಗೆ ನೆರವು ಆರೋಪ: ಮುಖ್ಯಮಂತ್ರಿ ವಿರುದ್ಧ ದೂರು
ಮಂಡ್ಯ, ಸೆ.19: ಪಾಂಡವಪುರ ತಾಲೂಕು ಬೇಬಿಬೆಟ್ಟದ ಕಾವಲ್ ಸರ್ವೇ ನಂ. 1ರ ಮೈಸೂರು ಮಹಾರಾಜ ವಂಶಸ್ಥರಿಗೆ ಸೇರಿದ ಭೂಮಿಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸುವವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವಾಗಿದ್ದಾರೆ ಎಂದು ಆರೋಪಿಸಿ ಆರ್‍ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಎಂಬವರು, ರಾಜ್ಯಪಾಲ ಮತ್ತು ಎಸಿಬಿ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.
ಸರ್ವೇ ನಂ. 1ರಲ್ಲಿನ 1,623.07 ಎಕರೆ ಜಮೀನು ಮೈಸೂರು ಮಹಾರಾಜರಿಗೆ ಸೇರಿದ್ದೆಂದು 1950ರಲ್ಲಿ ಭಾರತ ಸರಕಾರದ ಮುಖ್ಯ ಕಾರ್ಯದರ್ಶಿವಿ.ಪಿ.ಮೋಹನ್, ಮೈಸೂರು ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ಶ್ರೀನಿವಾಸನ್ ಗುರುತಿಸಿದ್ದು, 1968-69ರಲ್ಲಿ ಅಧಿಕಾರಿಗಳು ಆರ್‍ಟಿಸಿ ದಾಖಲೆ ತಿದ್ದುಪಡಿ ಸದರಿ ಜಾಗ ಸರಕಾರದ್ದೆಂದು ಬದಲಾಯಿಸಿ ಕೆಲವು ವ್ಯಕ್ತಿಗಳಿಗೆ ಕಲ್ಲುಗಣಿಗಾರಿಕೆ ನಡೆಸಲು ಗುತ್ತಿಗೆ ನೀಡಿದ್ದಾರೆ ಎಂದು ರವೀಂದ್ರ ದೂರಿನಲ್ಲಿ ಆರೋಪಿಸಿದ್ದಾರೆ.
ನಿರ್ಮಾಣ ಕಾಮಗಾರಿಗಳಿಗೆ ಕಲ್ಲಿನ ಅವಶ್ಯಕತೆಯಿದ್ದು, ಸದರಿ ಕಾವಲ್ ಪ್ರದೇಶದ ವಿವಾದವನ್ನು ಬಗೆಹರಿಸಿ ಕ್ರಮವಹಿಸುವಂತೆ ಮೈಸೂರು ವಿಭಾಗೀಯ ಆಯುಕ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24-02-2014ರಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮೌಖಿಕವಾಗಿ ಸೂಚಿಸುವ ಮೂಲಕ ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ರವೀಂದ್ರ ಮನವಿ ಮಾಡಿದ್ದಾರೆ.





