ಮೂಡಿಗೆರೆ ಕ್ಷೇತ್ರಕ್ಕೆ ಚಿಕ್ಕಮಗಳೂರು ಜನರು ಹೊರಗಿನವರಲ್ಲ: ದೀಪಕ್ ದೊಡ್ಡಯ್ಯ

ಚಿಕ್ಕಮಗಳೂರು, ಸೆ.19: ಮೂಡಿಗೆರೆ ತಾಲೂಕಿನ 5 ಹೋಬಳಿ ಮತ್ತು ಚಿಕ್ಕಮಗಳೂರು ತಾಲೂಕಿನ 4 ಹೋಬಳಿಗಳನ್ನು ಒಳಗೊಂಡಿರು ಮೂಡಿಗೆರೆ ಮೀಸಲು ಕ್ಷೇತ್ರಕ್ಕೆ ಚಿಕ್ಕಮಗಳೂರಿನ ಜನರು ಹೊರಗಿನವರಲ್ಲ ಎಂಬ ಸಣ್ಣ ಜ್ಞಾನವನ್ನು ಶಾಸಕ ಬಿ.ಬಿ.ನಿಂಗಯ್ಯ ಮತ್ತಿತರರು ತಿಳಿಯದಿರುವುದು ವಿಷಾದನೀಯ ಎಂದು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ತಿಳಿಸಿದ್ದಾರೆ.
ಅವರು ಮಂಗಳವಾರ ಈ ಕುರಿತು ಹೇಳಿಕೆ ನೀಡಿದ್ದು, ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಆಲ್ದೂರು ಹೋಬಳಿಯ ಆಲ್ದೂರು-ಹೊಸಳ್ಳಿ ಮತಗಟ್ಟೆಯ ಮತದಾರ ಕಳೆದ ವರ್ಷಗಷ್ಟೇ ಆಲ್ದೂರು ಜಿಪಂ ಕ್ಷೇತ್ರದಿಂದ ಸ್ಪರ್ಧಿಸಿದಾಗ, ಶಾಸಕರ ಮಗನನ್ನೇ ನನ್ನ ಎದುರು ಚುನಾವಣೆಗೆ ನಿಲ್ಲಿಸಿದ್ದರು ಎಂದಿದ್ದಾರೆ.
ಇಡೀ ಕ್ಷೇತ್ರವನ್ನು ಸುತ್ತಾಡಿ ಜನರ ಭಾವನೆ ಹಾಗೂ ಅಭಿಪ್ರಾಯಗಳನ್ನು ಕೇಳಿದಾಗ ಶಾಸಕರ ನಿಜವಾದ ಬಣ್ಣ ಬಯಲಾಗುತ್ತದೆ. ತಮ್ಮ ಮುಂದಿನ ಚುನಾವಣೆಯ ಬಗ್ಗೆ ಕಂಗೆಟ್ಟಿರುವ ಶಾಸಕರು ತಮ್ಮ ಪಕ್ಷದ ನಾಯಕರು ಮುಖಾಂತರ ಅಸಂಬದ್ದ ಹೇಳಿಕೆ ಕೊಡಿಸುತ್ತಿದ್ದಾರೆ. ಶಾಸಕನಾಗ ಬೇಕೆಂದು ಹಗಲು ಗನಸು ಕಾಣುತ್ತಿದ್ದಾರೆ. ಎಂದು ಹೇಳುವುದು, ಶಾಸಕರ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ. ಯಾರು ಶಾಸಕರಾಗಬೇಕು ಎಂಬುದನ್ನು ಕ್ಷೇತ್ರದ ಪ್ರಬುದ್ಧ ಮತದಾರರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ.
ಈ ಕ್ಷೇತ್ರದ ವಿವಿಧ ಭಾಗಗಳಲ್ಲಿ ಸಾವಿರಾರು ಕುಟುಂಬಗಳು, ಪ್ರಾಣಿಗಳು ಬದುಕಲು ಯೋಗ್ಯವಲ್ಲದಂತಹ ಮನೆಗಳಲ್ಲಿ ವಾಸವಾಗಿರುವುದನ್ನು ನೋಡಿದರೆ ಬಿ.ಬಿ. ನಿಂಗಯ್ಯನವರ ಅಭಿವೃದ್ಧಿ ಕಾರ್ಯಗಳು ಯಾವ ಮಟ್ಟಕ್ಕೆ ಆಗಿವೆ ಎನ್ನುವುದರ ಅರಿವಾಗುತ್ತದೆ. ಇಡೀ ಕ್ಷೇತ್ರದಲ್ಲಿ ಶೇ.80ರಷ್ಟು ರಸ್ತೆಗಳು ಹಾಳಾಗಿ ಗುಂಡಿ, ಗೊಟರುಗಳಿಂದ ಕೂಡಿದೆ. ಕೇವಲ ಚಿಕ್ಕಮಗಳೂರಿನಿಂದ ಮೂಡಿಗೆರೆ ಹೋಗುವ ರಸ್ತೆ ಒಂದನ್ನೆ ಗಮನಿಸಿದರೆ ಸಾಕು. ಮೂಡಿಗೆರೆ ಕ್ಷೇತ್ರದ ಎಲ್ಲಾ ರಸ್ತೆಗಳ ಸ್ಥಿತಿಗತಿ ಆರ್ಥವಾಗುತ್ತದೆ. ಶಾಸಕರು ಕೇವಲ ಪೇಪರ್ ಟೈಗರ್ ಆಗದೆ ಅಭಿವೃದ್ಧಿ ಕೆಲಸಗಳನ್ನು ಸರಿಯಾಗಿ ಮಾಡಲಿ ಎಂದು ಆಗ್ರಹಿಸಿದ್ದಾರೆ.







