ಸರಕಾರದ ಅಧಿಕಾರಶಾಹಿಯಿಂದ ಬಹುತೇಕ ಯೋಜನೆಗಳು ಅಸಮರ್ಪಕ: ಕೆ.ಬಿ.ಸಿದ್ದಯ್ಯ

ತುಮಕೂರು, ಸೆ.19: ರಾಜ್ಯ ಸರಕಾರ ಕಳೆದ ನಾಲ್ಕುವರೆ ವರ್ಷದಲ್ಲಿ ಬಡಜನರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರೂ, ಅಧಿಕಾರಶಾಹಿಯ ಧೋರಣೆಯಿಂದ ಬಹುತೇಕ ಯೋಜನೆಗಳು ಸಮರ್ಪಕವಾಗಿ ಜಾರಿಗೆ ಬರಲು ಸಾಧ್ಯವಾಗಿಲ್ಲ ಎಂದು ಸಾಹಿತಿ ಕೆ.ಬಿ.ಸಿದ್ದಯ್ಯ ತಿಳಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಎಪಿಎಂಸಿ ನಿರ್ದೇಶಕ ಶಿವಕುಮಾರ್ ರಾಜ್ಯ ಸರಕಾರದ ನಾಲ್ಕು ವರ್ಷಗಳ ಸಾಧನೆಯನ್ನು ಬಿಂಬಿಸುವ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ಮೈತ್ರಿ, ಕ್ಷೀರಧಾರೆ,ಕೃಷಿ ಭಾಗ್ಯ, ವಿದ್ಯಾಸಿರಿ, ಪಶುಭಾಗ್ಯ ಸೇರಿದಂತೆ ಹಲವು ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆ. ಆದರೆ ಪೌರಕಾರ್ಮಿಕರ ಖಾಯಂ, ಗುತ್ತಿಗೆ ಪದ್ಧತಿ ರದ್ದು, ಅಂಗನವಾಡಿ, ಬಿಸಿಯೂಟ ನೌಕರರು ಸೇರಿದಂತೆ ಅಸಂಘಟಿತ ಕಾರ್ಮಿಕರ ಹಲವಾರು ಬೇಡಿಕೆಗಳು ಮತ್ತು ಸರಕಾರ ನೀಡಿದ್ದ ಭರವಸೆಗಳು ನೆನೆಗುದಿಗೆ ಬಿದ್ದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಮೈಸೂರು ವಿವಿಯ ಎ.ಎಂ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಲ್ಲೆ, ಸಮಾಜವಾದಿ ಹಿನ್ನೆಲೆಯಿಂದ ಬಂದ ಅವರು, ಹಲವು ಹೋರಾಟಗಳ ಮೂಲಕವೇ ಜನಮನದಲ್ಲಿ ಗುರುತಿಸಿ ಕೊಂಡವರು. ಶೋಷಣೆಯನ್ನು ಸ್ವತಹಃ ಅನುಭವಿಸಿದ್ದರಿಂದ ಎಸ್ ಸಿಪಿ ಮತ್ತು ಟಿಎಸ್ ಪಿ ಯೋಜನೆಗಳ ಮೂಲಕ ಆ ಸಮುದಾಯಗಳ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದಾರೆ. ನಾನು ಕಾಂಗ್ರೆಸ್ ಪಕ್ಷದ ಸದಸ್ಯನಲ್ಲದಿದ್ದರೂ ಈ ಕಿರು ಹೊತ್ತಿಗೆ ಬಿಡುಗಡೆ ಮಾಡಲು ಒಪ್ಪಿದ್ದೆ ಮುಖ್ಯಮಂತ್ರಿಗಳ ಜನಪರ ನಿಲುವುಗಳಿಗಾಗಿ, ದೇವರಾಜ ಅರಸು ನಂತರ ಶೋಷಿತ ಸಮುದಾಯಗಳ ಬಗ್ಗೆ ಕಾಳಜಿ ಇರುವ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಮುಖಂಡ ಆರ್.ಶಿವಕುಮಾರ್ ಮಾತನಾಡಿ, ಚುನಾವಣೆ ಇನ್ನೂ ಆರು ತಿಂಗಳು ಬಾಕಿಯಿದ್ದು, ಕಳೆದ ನಾಲ್ಕುವರೆ ವರ್ಷಗಳ ಸರಕಾರದ ಸಾಧನೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಕಿರು ಹೋತ್ತಿಗೆ ತರಲಾಗಿದೆ. ಇದರಲ್ಲಿ ಇಂದಿರಾ ಕ್ಯಾಂಟೀನ್,ಜನತಾದರ್ಶನದಂತಹ ಕೆಲವು ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಳ್ಳುತ್ತೇನೆ. ಸರಕಾರದ ಸಾಧನೆಯನ್ನು ಪ್ರತಿಯೊಬ್ಬ ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ ಎಂದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಉಪಾಧ್ಯಕ್ಷ ನಂದಿಹಳ್ಳಿ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.







