ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಉತ್ತಮ ಆರೋಗ್ಯ ಕಾಣಲು ಸಾಧ್ಯ: ಅಶ್ವತಿ

ಜಗಳೂರು, ಸೆ.19: ಸ್ವಚ್ಛ ರಾಷ್ಟ್ರಗಳ ಗುಂಪಿಗೆ ಭಾರತ ದೇಶವನ್ನು ಸೇರಿಸಲು ಪ್ರತಿಯೊಬ್ಬರ ಶ್ರಮ ಹಾಗೂ ಆಸಕ್ತಿ ಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಅಶ್ವತಿ ಹೇಳಿದರು.
ತಾಲೂಕಿನ ಗುತ್ತಿದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕೊಣಚಗಲ್ಲು ಗುಡ್ಡದ ರಂಗನಾಥ ಸ್ವಾಮಿಯ ದೇವಸ್ಥಾನದ ಸಮೀಪವಿರುವ ಪುಷ್ಕರಣಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನ ಮಂತ್ರಿಯವರ ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಒತ್ತು ನೀಡಲಾಗುತ್ತಿದ್ದು, ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸಗಳು ನಡೆಯುತ್ತಿವೆ. ಎಷ್ಟೇ ಜಾಗೃತಿ ಮೂಡಿಸಿದರೂ ಸಾರ್ವಜನಿಕರಲ್ಲಿ ಆಸಕ್ತಿ ಮೂಡಿದಾಗ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಹಕಾರಿಯಾಗಲಿದೆ. ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಆಸ್ತಿ ಎಂದರೆ ತಪ್ಪಾಗಲಾರದು. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ ಎಂದರು.
ಪ್ರತಿಯೊಬ್ಬರೂ ಆಸಕ್ತಿ ವಹಿಸಿ ಸ್ವಚ್ಛತೆಗೆ ಆದ್ಯತೆ ನೀಡುವುದರಿಂದ ಸ್ವಚ್ಛ ರಾಷ್ಟ್ರಗಳ ಗುಂಪಿನಲ್ಲಿ ನಮ್ಮ ದೇಶ ಸಹ ಸೇರಿಸಬಹುದು. ತಾಲೂಕಿನ ಐತಿಹಾಸಿಕ ಈ ಪುಷ್ಕರಣಿಯನ್ನು ಜೀರ್ಣೋದ್ದಾರ ಮಾಡುವಂತಹ ಕೆಲಸ ಆಗಬೇಕಾಗಿದ್ದು, ನಮ್ಮ ಇಲಾಖೆಯಿಂದ ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಇಒ ಜಾನಕಿರಾಮ್ ಮಾತನಾಡಿ, ತಾಲೂಕಿನ ಪ್ರಸಿದ್ಧ ಹಾಗೂ ಐತಿಹಾಸಿಕ ರಂಗನಾಥ ಸ್ವಾಮಿಯ ಸನ್ನಿಧಿಯಲ್ಲಿ ಪುಷ್ಕರಣಿಯು ದೇವಸ್ಥಾನಕ್ಕೆ ಜ್ಯೋತಿಯಂತೆ ಕಂಗೊಳಿಸುತ್ತಿದ್ದು, ಇದರ ಜೀರ್ಣೋದ್ಧಾರದ ಕೊರತೆಯಿಂದ ಎಲೆಮರೆಯ ಕಾಯಿಯಂತಾಗಿದೆ. ಇಂತಹ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರಿಗೂ ಆಸಕ್ತಿ ಬೆಳೆಯಲು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಆಂಜನೇಯ, ತಾಲೂಕು ಪಂಚಾಯತ್ ಲೆಕ್ಕಾಧಿಕಾರಿ ಶಿವರುದ್ರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.







