ಸೊರಬ: ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಮನವಿ

ಸೊರಬ, ಸೆ.19: ಕಳೆದ 25-30 ವರ್ಷಗಳಿಂದ ಹೊಸಬಾಳೆ ಗ್ರಾಮದ ಸರ್ವೇ ನಂ. 50ರಲ್ಲಿ ಬಗರ್ ಹುಕುಂ ಜಮೀನು ಸಾಗುವಳಿ ಮಾಡಿದ್ದು, ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರಾಗಿದ್ದು, ಕೂಡಲೇ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ತಾಲೂಕಿನ ಹೊಸಬಾಳೆ ಗ್ರಾಮಸ್ಥರು ಸೋಮವಾರ ತಹಶೀಲ್ದಾರ್ ಎಲ್.ಬಿ.ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.
2007-08ನೆ ಸಾಲಿನಲ್ಲಿ ಸರ್ವೇ ನಂ. 50ರಲ್ಲಿ ಕೆಲವರಿಗೆ ಹಕ್ಕುಪತ್ರ ಸಿಕ್ಕಿದೆ. ಈಗಾಗಲೇ ರೈತರು ಗೇರು, ಅಡಿಕೆ, ಬಾಳೆ, ಶುಂಠಿ ಬೆಳೆದಿದ್ದಾರೆ. ಆದರೆ ನೂರಾರು ರೈತರು ಹೊಟ್ಟೆಪಾಡಿಗಾಗಿ ಮಾಡಿಕೊಂಡಿರುವ ಭೂಮಿಗೆ ಹಕ್ಕು ಪಡೆಯದಂತೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ. ಕಾನೂನು ಪ್ರಕಾರ ಸಿಗುವ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಅಧಿಕಾರವಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಭೂಮಿ ಹಕ್ಕು ಪಡೆದಿರುವ ಕೆಲವು ಸ್ಥಿತಿವಂತರು ಸುಳ್ಳು ದಾಖಲಾತಿ ನೀಡಿ ಬಗರ್ ಹುಕುಂ ಜಮೀನು ಪಡೆಯಲು ಹುನ್ನಾರ ನಡೆಸಲು ಮುಂದಾಗಿದ್ದಾರೆ. ಆದರೆ ತಮಗೆ ಭೂಮಿ ಮಂಜೂರಾಗುವುದಿಲ್ಲ ಎನ್ನುವ ಸತ್ಯ ತಿಳಿದು ದಲಿತರನ್ನು ಹಾಗೂ ಹಿಂದುಳಿದವರನ್ನು ಒಕ್ಕಲೆಬ್ಬಿಸಲು ಅಧಿಕಾರಿಗಳ ಬಳಿ ಸಾಗುವಳಿದಾರರನ್ನು ತೆರವುಗೊಳಿಸುವಂತೆ ಮನವಿ ಮಾಡಿರುವುದರ ಹಿಂದೆ, ಅನುಕೂಲಸ್ಥರ ಸ್ವಾರ್ಥ ಇದೆ. ಕಾನೂನು ಪ್ರಕಾರ ಬಡವರಿಗೆ ಭೂಮಿ ಹಕ್ಕು ಸಿಗುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಕೆ.ಅಜ್ಜಪ್ಪ, ಕೆ.ವಿ.ಗೌಡ್ರು, ಗ್ರಾಮಸ್ಥರಾದ ನಾರಾಯಣಮೂರ್ತಿ, ಕೆರೆಯಪ್ಪ, ಬಂಗಾರಪ್ಪ, ರತ್ನಾಕರ್, ತಾರಾ,ಚೌಡಮ್ಮ, ದಿನೇಶ್,ಇಂದ್ರಮ್ಮ, ರೇಣುಕಾ, ಗಿಡ್ಡಪ್ಪ, ಶ್ರೀನಿವಾಸ, ದುರ್ಗಪ್ಪ, ಬಾಲಚಂದ್ರ, ಲೋಕೇಶ್, ಪರಶುರಾಮ, ಓಂಕಾರ, ಬೊಮ್ಮಪ್ಪ, ಕೃಷ್ಣಮೂರ್ತಿ,ರಾಜು, ಶಿವಪ್ಪ, ಲಿಂಗರಾಜ್ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.







