ರೈಲಿನಲ್ಲಿ ಚಿನ್ನಾಭರಣ ದರೋಡೆ: ತನಿಖೆ ಚುರುಕು
ಉಡುಪಿ, ಸೆ.19: ಪಡುಬಿದ್ರೆ- ಸುರತ್ಕಲ್ ಮಧ್ಯೆ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕೋಟ್ಯಂತರ ರೂ. ವೌಲ್ಯದ ಚಿನ್ನಾಭರಣಗಳ ದರೋಡೆಗೈದ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ಈಗಾಗಲೇ ರಚಿಸಿರುವ ಮೂರು ತಂಡಗಳ ಪೈಕಿ ಒಂದು ತಂಡ ಮುಂಬೈಗೆ ತೆರಳಿದ್ದು, ಉಳಿದ ತಂಡಗಳು ಬೇರೆ ಬೇರೆ ದಿಕ್ಕಿಗೆ ತೆರಳಿ ತನಿಖೆ ನಡೆಸುತ್ತಿವೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ಸುರತ್ಕಲ್‌ಗೆ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿರುವ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲನೆ ನಡೆಸಲಾಗಿದೆ. ಆದರೆ ದರೋಡೆ ಸಂದರ್ಭದಲ್ಲಿ ಆ ಸಿಸಿಟಿವಿಗಳು ಕೆಲಸ ಮಾಡುತ್ತಿರಲಿಲ್ಲ ಎಂಬುದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸಿ ದರೋಡೆಯ ರಹಸ್ಯ ಬಯಲಿಗೆಳೆಯುವ ವಿಶ್ವಾಸವ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಮುಂಬೈಯ ಜಿ.ಎಂ.ಗೋಲ್ಡ್ ಪ್ರೈವೆಟ್ ಲಿಮಿಟೆಡ್‌ನ ಸೇಲ್ಸ್‌ಮೆನ್ ರಾಜಸ್ಥಾನದ ರಾಜೇಂದ್ರ ಸಿಂಗ್ ಶಕ್ತವಕ್ತ್(38) ಮುಂಬೈಯಿಂದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೋಗುತ್ತಿದ್ದಾಗ ಪಡುಬಿದ್ರೆ ಹಾಗೂ ಸುರತ್ಕಲ್ ಮಧ್ಯೆ ನಾಲ್ವರು ದರೋಡೆಕೋರರ ತಂಡ ಪಿಸ್ತೂಲ್ ತೋರಿಸಿ, ಚೂರಿಯಿಂದ ಇರಿದು 1,28,32,216ರೂ. ಮೌಲ್ಯದ 4.112 ಕೆ.ಜಿ. ಚಿನ್ನಾಭರಣ ಇದ್ದ ಸೂಟ್‌ಕೇಸ್ ಹಾಗೂ ಮೊಬೈಲ್‌ನೊಂದಿಗೆ ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದು ಪರಾರಿಯಾಗಿತ್ತು. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.