ಬಿಡಿಎನಿಂದ ನೇರವಾಗಿ ಫ್ಲಾಟ್ ಹಂಚಿಕೆ
ಬೆಂಗಳೂರು, ಸೆ.19: ನಗರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಿಂದ ನೇರವಾಗಿ ಫ್ಲಾಟ್‌ಗಳನ್ನು ಮಾರಾಟ ಮಾಡುವುದಕ್ಕೆ ಆರಂಭ ಮಾಡಿರುವುದರಿಂದ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ.
ಇದುವರೆಗೂ 400 ಫ್ಲಾಟ್‌ಗಳು ಮಾರಾಟವಾಗಿದ್ದು, 800 ಕ್ಕೂ ಅಧಿಕ ಜನರು ಖರೀದಿಗೆ ನೋಂದಣಿ ಮಾಡಿಕೊಂಡಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ 2,700 ಫ್ಲಾಟ್‌ಗಳ ಮಾರಾಟಕ್ಕೆ ಬಿಡಿಎ ಆ.9 ರಂದು ಅರ್ಜಿ ಆಹ್ವಾನಿಸಿತ್ತು. ಆದರೆ, ಈ ವೇಳೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಈ ಹೊಸ ತಂತ್ರ ಅನುಸರಿಸುತ್ತಿದೆ.
ಅರ್ಜಿ ಸಲ್ಲಿಸಲು ದಿನಾಂಕ ನಿಗದಿಪಡಿಸಿ, ಬಂದ ಅರ್ಜಿಗಳನ್ನು ಚೀಟಿ ಎತ್ತುವ ಮೂಲಕ ಹಂಚಿಕೆ ಮಾಡುವ ವಿಧಾನ ಕೈಬಿಟ್ಟಿದ್ದು, ನೇರ ಖರೀದಿಗೆ ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. ಬಿಡಿಎ ಕೇಂದ್ರ ಕಚೇರಿ ಆವರಣದಲ್ಲಿ ಪ್ರತ್ಯೇಕ ಕೌಂಟರ್ ಆರಂಭಿಸಿ ಐದು ಜನ ಸಿಬ್ಬಂದಿಯೊಂದಿಗೆ ಕೆಲಸ ಆರಂಭಿಸಿದೆ.
ಈ ಹೊಸ ವಿಧಾನದಿಂದ ಫ್ಲಾಟ್‌ಗೆ ಅರ್ಜಿ ಸಲ್ಲಿಸಿ ಕಾಯಬೇಕಾದ ಅಗತ್ಯವಿಲ್ಲ. ನಿಗದಿತ ಶುಲ್ಕವನ್ನು ಕೆನರಾ ಬ್ಯಾಂಕಿನಲ್ಲಿ ಪಾವತಿಸಿ ನೋಂದಣಿ ನಮೂನೆ ಮತ್ತು ಅರ್ಜಿ ನಮೂನೆ ಪಡೆಯಬಹುದು. ಬೇರೆ ಯಾವುದೇ ಬಿಡಿಎ ಕಚೇರಿಯಲ್ಲಿ ಅರ್ಜಿ ವಿತರಿಸುವುದಿಲ್ಲ. ನಿಗದಿತ ಆರಂಭಿಕ ಠೇವಣಿ ಮೊತ್ತವನ್ನು ಡಿಡಿ ಅಥವಾ ಚೆಕ್ ಮತ್ತು ಪೇ ಆರ್ಡರ್ ಮೂಲಕ ಪಾವತಿಸಬಹುದು. ನಂತರ ಭರ್ತಿ ಮಾಡಿದ ಅರ್ಜಿ ನೋಂದಣಿ ಕಾರ್ಡ್ ಅನ್ನು ಬಿಡಿಎ ಕೇಂದ್ರ ಕಚೇರಿ ಕೌಂಟರ್‌ನಲ್ಲಿ ನೀಡಿ ಸ್ವೀಕೃತಿ ಪಡೆಯಬಹುದಾಗಿದೆ ಎಂದು ತಿಳಿದು ಬಂದಿದೆ.







