ರಸ್ತೆ ಗುಂಡಿಗಳಿಗೆ ಕಟ್ಟಡಗಳ ಅವಶೇಷಗಳಿಂದ ತೇಪೆ: ಸಾರ್ವಜನಿಕರ ಆರೋಪ
ಬೆಂಗಳೂರು, ಸೆ.19: ನಗರದಲ್ಲಿ ಬಿದ್ದಿದ್ದ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಪಾಲಿಕೆ ಆಯುಕ್ತರು ನೀಡಿದ್ದ ಸಮಯಾವಕಾಶ ಮುಗಿಯುತ್ತಿರುವುದರಿಂದ ಬಿಬಿಎಂಪಿ ಗುತ್ತಿಗೆದಾರರು ಆತುರವಾಗಿ ಕಟ್ಟಡದ ಪುಡಿ ತಂದು ತುಂಬುವ ಮೂಲಕ ತೇಪೆ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಹಕಾರ ನಗರ, ಬೆಂಗಳೂರು ನಗರ ಕೇಂದ್ರವಾದ ಮೆಜೆಸ್ಟಿಕ್, ಚಿಕ್ಕಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆ, ಕಲ್ಯಾಣ್ ನಗರದ ಕೆಲ ರಸ್ತೆಗಳು, ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ, ಸಿರ್ಸಿ ಸರ್ಕಲ್ ಕೆಳಗಿನ ವೆುೀಲು ಸೇತುವೆ, ಮಾಗಡಿ ರಸ್ತೆ, ಬಸವೇಶ್ವರ ನಗರದ ಕೆಲ ಪ್ರದೇಶಗಳು, ವಿಕ್ಟೋರಿಯಾ ಆಸ್ಪತ್ರೆ ಸುತ್ತಮುತ್ತ ರಸ್ತೆಗಳಲ್ಲಿನ ಗುಂಡಿಗಳಿಗೆ ಕಟ್ಟಡದ ಅವಶೇಷಗಳಿಂದ ಮುಚ್ಚಲಾಗಿದೆ ಎಂದು ವಾಹನ ಸವಾರರು ದೂರಿದ್ದಾರೆ.
ಕೆಲವು ಕಡೆಗಳಲ್ಲಿ ವಾಹನ ಸವಾರರು ಕಲ್ಲುಪುಡಿ, ಗುಡ್ಡೆಗಳನ್ನು ತಪ್ಪಿಸಿಕೊಂಡು ವಾಹನ ಚಲಾಯಿಸಬೇಕಾಗಿದೆ. ಅಲ್ಲದೆ, ಕೆಲವು ಕಡೆಗಳಲ್ಲಿ ರಸ್ತೆ ಉಬ್ಬು ತಗ್ಗುಗಳ ರಸ್ತೆಯನ್ನು ತಪ್ಪಿಸಿಕೊಂಡು ಹೋಗಲು ಫುಟ್ ಪಾತ್‌ಗಳನ್ನು ಬಳಕೆ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.ಹಲವು ರಸ್ತೆಗಳಲ್ಲಿ ಸಣ್ಣ ವ್ಯಾಪಾರಿಗಳಿಗೂ ತೀವ್ರ ತೊಂದರೆಯಾಗುತ್ತಿದೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆ ಬಂದರೆ ರಸ್ತೆಯ ಚರಂಡಿ ಮುಚ್ಚಿಕೊಂಡು ನೀರು ರಸ್ತೆಗೆ ಬರುತ್ತಿದೆ. ರಸ್ತೆಯಲ್ಲಿ ನೀರು ನಿಲ್ಲುವುದರಿಂದ ರಸ್ತೆ ಜಲ್ಲಿಯು ಹಾನಿಗೀಡಾಗಿ ಹಾನಿಕಾರಕ ರಸ್ತೆಗಳಾಗಿ ಮಾರ್ಪಡುತ್ತಿವೆ. ಬಿಬಿಎಂಪಿಯ ತಾತ್ಕಾಲಿಕ ಜಲ್ಲಿಗಳು ಮತ್ತಷ್ಟು ಹಾನಿಯಾಗುತ್ತಿವೆ. ಮಣ್ಣೆಲ್ಲಾ ರಸ್ತೆಯಲ್ಲಿ ನಿಂತು ವಾಹನಗಳು ಉರುಳಿ ಬಿಡುತ್ತಿವೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.







