ಸೆ.21ರಂದು ಮಿಲ್ಲಿ ಕೌನ್ಸಿಲ್ ಕಾರ್ಯಕಾರಿಣಿ ಸಭೆ
ಬೆಂಗಳೂರು, ಸೆ.19: ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಸೆ.21ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ರಾಜ್ಯ ಘಟಕದ ಉಪಾಧ್ಯಕ್ಷ ಸುಲೇಮಾನ್‌ಖಾನ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕಾರಿಣಿ ಸಭೆಯಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಅಬ್ದುಲ್ಲಾ ಮುಘೇಸಿ, ಸಂಸದ ಮೌಲಾನ ಅಸ್ರಾರುಲ್ ಹಕ್ ಖಾಸ್ಮಿ, ಪ್ರಧಾನ ಕಾರ್ಯದರ್ಶಿ ಡಾ.ಮನ್ಝೂರ್ ಆಲಂ, ವಕೀಲ ಜಫರಿಯಾಬ್ ಜೀಲಾನಿ ಸೇರಿದಂತೆ ಇನ್ನಿತರ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ರಾಷ್ಟ್ರೀಯ ಉಪಾಧ್ಯಕ್ಷ ಮೌಲಾನ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ, ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಬೆಂಗಳೂರಿನಲ್ಲೆ ನಡೆಸಬೇಕು ಎಂದು ಅಪೇಕ್ಷೆ ಪಟ್ಟು, ದಿನಾಂಕ ನಿಗದಿಪಡಿಸಿದ್ದರು. ಅಲ್ಲದೆ, ಕಾರ್ಯಕಾರಿಣಿ ಸಭೆಗೆ ನಮ್ಮ ರಾಜ್ಯದ ಎಲ್ಲ ಜಿಲ್ಲೆಗಳ ಮುಖಂಡರನ್ನು ಆಹ್ವಾನಿಸಬೇಕು ಎಂದು ಬಯಸಿದ್ದರು. ಅವರ ಅಪೇಕ್ಷೆಯಂತೆ ಈ ಸಭೆಗೆ ರಾಜ್ಯದ ಎಲ್ಲ ಜಿಲ್ಲೆಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕಾರಿಣಿ ಸಭೆಯಲ್ಲಿ ಮುಹಮ್ಮದ್ ಅಶ್ರಫ್ ಅಲಿ ಹಾಗೂ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಸದಸ್ಯರಾಗಿದ್ದ, ಮಾಜಿ ಸಚಿವ ಡಾ.ಖಮರುಲ್ ಇಸ್ಲಾಮ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದರು.
ಹೊಸದಿಲ್ಲಿಯಲ್ಲಿ ಮಿಲ್ಲಿ ಕೌನ್ಸಿಲ್ ವತಿಯಿಂದ ‘ಸಂವಿಧಾನ ರಕ್ಷಿಸಿ, ದೇಶ ನಿರ್ಮಿಸಿ’ ವಿಚಾರದಡಿಯಲ್ಲಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಅಲ್ಲಿ ಕೈಗೊಂಡ ನಿರ್ಣಯಗಳನ್ನು ಯಾವ ರೀತಿಯಲ್ಲಿ ಅನುಷ್ಠಾನಕ್ಕೆ ತರಬೇಕು ಎಂಬುದರ ಕುರಿತು ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಹೊಸದಿಲ್ಲಿಯಲ್ಲಿ ನಡೆದ ಸಮಾವೇಶದಲ್ಲಿ ಜಾತ್ಯತೀತ ಮನೋಭಾವನೆಯ ಎಲ್ಲ ಧರ್ಮದ ಮುಖಂಡರು ಪಾಲ್ಗೊಂಡಿದ್ದರು. ಸಮಾವೇಶದ ಆತಿಥ್ಯವನ್ನು ಸಿಖ್ ಸಮುದಾಯದವರು ವಹಿಸಿದ್ದರು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ನ್ಯಾ.ರಾಜೀಂದರ್ ಸಾಚಾರ್, ಇಡೀ ದೇಶದಲ್ಲಿ ಈ ಚಳವಳಿಯನ್ನು ನಡೆಸಬೇಕೆಂದು ಕರೆ ನೀಡಿದ್ದರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ವೌಲಾನ ಮುಸ್ತಫಾ ರಿಫಾಯಿ, ರಾಜ್ಯಾಧ್ಯಕ್ಷ ವೌಲಾನ ಎಜಾಝ್ ಅಹ್ಮದ್ ನದ್ವಿ, ಉಪಾಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್, ಪ್ರಧಾನ ಕಾರ್ಯದರ್ಶಿ ಸೈಯದ್ ಶಾಹೀದ್ ಅಹ್ಮದ್, ಸಹ ಪ್ರಧಾನ ಕಾರ್ಯದರ್ಶಿ ಜಮೀಲ್ ಅಹ್ಮದ್, ಖಜಾಂಚಿ ಆಸೀಮ್‌ಸೇಠ್, ಮುಖಂಡರಾದ ಮುಹಮ್ಮದ್ ಅಝರ್, ಮಝರ್‌ಖಾದ್ರಿ ಉಪಸ್ಥಿತರಿದ್ದರು.







