ಒಂದು ಲಕ್ಷ ಮನೆಗಳ ನಿರ್ಮಾಣಕ್ಕೆ ಸಾವಿರ ಎಕರೆ ಮೀಸಲು: ಎಂ.ಕೃಷ್ಣಪ್ಪ

ಬೆಂಗಳೂರು, ಸೆ.20: ವಸತಿ ಇಲ್ಲದವರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಒಂದು ಸಾವಿರ ಎಕರೆ ಭೂಮಿಯನ್ನು ಮೀಸಲಿರಿಸಿದ್ದು, ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ವಸತಿ ಸಚಿವ ಎಂ.ಕೃಷ್ಣಪ್ಪ ತಿಳಿಸಿದ್ದಾರೆ.
ಬುಧವಾರ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸ್ವತಂತ್ರ ಪಾಳ್ಯ, ಗೋಪಾಲಪುರ ಮತ್ತು ವಿವೇಕಾನಂದ ಕಾಲನಿ(ಮುನೇಶ್ವರ ಬ್ಲಾಕ್) ಕೊಳಚೆ ಪ್ರದೇಶಗಳಲ್ಲಿ 53 ಕೋಟಿ ರೂ.ವೆಚ್ಚದ ನೆಲ ಮಹಡಿ ಮನೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಬೆಂಗಳೂರಿನಲ್ಲಿ ಮನೆಗಳನ್ನು ನಿರ್ಮಿಸುವ ಯೋಜನೆಗಳನ್ನು ಸರಕಾರ ಹಮ್ಮಿಕೊಂಡಿದೆ. ಈ ಸಂಬಂಧ ಒಂದು ಸಾವಿರ ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಇದರ ಜೊತೆಗೆ ಮನೆಗಳನ್ನು ಬಡ ಜನತೆಗೆ ನೀಡುವ ಸಂಬಂಧ ಮಾನದಂಡಗಳನ್ನು ಇಲಾಖೆ ಸಿದ್ಧಪಡಿಸಲಿದೆ ಎಂದು ಹೇಳಿದರು.
ಗಾಂಧಿನಗರ ವ್ಯಾಪ್ತಿಯಲ್ಲಿ ಕೊಳಗೇರಿ ಪ್ರದೇಶ ಹೆಚ್ಚಾಗಿದ್ದು, ಇಲ್ಲಿ ಇನ್ನು ಒಂದು ಸಾವಿರ ಮನೆ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಬಂದಿದೆ. ಇಲ್ಲಿನ ಶಾಸಕ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ. ಹೀಗಾಗಿ ಅಗತ್ಯವಿರುವ ಎಲ್ಲರಿಗೂ ಮನೆಗಳನ್ನು ನಿರ್ಮಿಸುವುದು ಸರಕಾರದ ಗುರಿ. ಬೇಡಿಕೆ ಬಂದಷ್ಟು ಮನೆಗಳನ್ನು ನಿರ್ಮಿಸಿ ಕೊಡಲು ಸರಕಾರ ಬದ್ಧವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಳೆದ 40 ವರ್ಷದಲ್ಲಿ ಕೇವಲ 64ಸಾವಿರ ಮನೆಗಳನ್ನು ಮಾತ್ರ ನಿರ್ಮಾಣವಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕೇವಲ 4 ವರ್ಷದಲ್ಲಿ 90 ಸಾವಿರಕ್ಕೂ ಹೆಚ್ಚಿನ ಮನೆಗಳನ್ನು ನಿರ್ಮಿಸಿದೆ. ಒಟ್ಟಾರೆ ಗುಡಿಸಲು ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲಾಗಿದೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಮೂರು ವರ್ಷದ ಹಿಂದೆ ಇದೇ ಕ್ಷೇತ್ರದಲ್ಲಿ ನೂರಾರು ಮನೆಗಳ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಆದರೆ, ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅನುದಾನ ಕೊಡದೆ ವಂಚಿಸಿತು. ತದನಂತರ ರಾಜ್ಯ ಸರಕಾರವೇ ಈ ಪ್ರಕ್ರಿಯೆಯನ್ನು ಮುಂದುವರೆಸಿ ಕೊಳಗೇರಿ ನಿವಾಸಿಗಳಿಗೆ ಮನೆಗಳನ್ನು ಕಟ್ಟಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಇತರೆ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಬಡವರ ಪರ ಕಾಳಜಿ ತೋರಿಸುತ್ತಾರೆ. ಆದರೆ, ಕಾಂಗ್ರೆಸ್ ಬಡವರಿಗಾಗಿ ಹುಟ್ಟಿದೆ. ಎಲ್ಲರಿಗೂ ಮೂಲಭೂತ ಸೌಕರ್ಯ ಒದಗಿಸಲು ಸರಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ವಿ.ದೇವರಾಜ್, ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ, ಪಾಲಿಕೆ ಸದಸ್ಯರಾದ ಸತ್ಯನಾರಾಯಣ, ಗೋವಿಂದರಾಜು, ಮಾಜಿ ಸದಸ್ಯ ಚಕ್ರವರ್ತಿ, ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಪತ್ ಸೇರಿ ಪ್ರಮುಖರಿದ್ದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೇಯರ್ ಪದ್ಮಾವತಿ ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಲಿರುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಈಗಾಗಲೇ ಸಮ್ಮತಿ ಸೂಚಿಸಿದ್ದಾರೆ.
-ಆರ್.ವಿ. ದೇವರಾಜ್, ಶಾಸಕ







