ಬೈಕ್ ಕಳವು ಪ್ರಕರಣ: ಮೂವರ ಬಂಧನ

ಬೆಂಗಳೂರು, ಸೆ.20: ಬೈಕ್‌ಗಳನ್ನು ಕಳ್ಳತನ ಮಾಡಿ ಆ ವಾಹನಗಳಲ್ಲೇ ಸುತ್ತಾಡುತ್ತಾ ಸರ ಅಪಹರಣ ಮಾಡುತ್ತಿದ್ದ ಪ್ರಕರಣ ಸಂಬಂಧ ಮೂವರನ್ನು ಬಾಣಸವಾಡಿ ಪೊಲೀಸರು ಬಂಧಿಸಿ 7.5 ಲಕ್ಷ ರೂ. ಬೆಲೆ ಬಾಳುವ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಕೆ.ಜಿ.ಹಳ್ಳಿ ಎಜೈಕಲ್ ಇಂಡಸ್ಟ್ರಿಯಲ್ ನಿವಾಸಿಗಳಾದ ಸಝ್ಜಿದ್, ಸೈಯದ್ ನಾಸೀರ್ ಮತ್ತು ಕಲೀಂ ಖಾನ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಬಂಧನದಿಂದ ಬಾಣಸವಾಡಿ ವ್ಯಾಪ್ತಿಯ ನಾಲ್ಕು ಸರ ಅಪಹರಣ ಪ್ರಕರಣ, ಮೂರು ಮನೆ ಕಳ್ಳವು ಹಾಗೂ ಇತರೆ ಕಳವು ಮತ್ತು ಹಲಸೂರು, ಕೆ.ಆರ್.ಪುರಂ, ಡಿ.ಜೆ.ಹಳ್ಳಿ, ಬಾಣಸವಾಡಿ ಮತ್ತು ಕೊತ್ತನೂರು ಠಾಣೆ ಸರಹದ್ದುಗಳಲ್ಲಿ ಕಳ್ಳತನವಾಗಿದ್ದಂತಹ ಐದು ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 13 ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇವರೊಂದಿಗೆ ಸೇರಿ ಸುಲಿಗೆ ಮಾಡುತ್ತಿದ್ದ ಮತ್ತೊಬ್ಬ ಆರೋಪಿ ಇಮ್ರಾನ್ ತಲೆಮರೆಸಿಕೊಂಡಿದ್ದು ಈತನ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.





