ಪೊಲೀಸ್ ಆಯುಕ್ತರಿಗೆ ಬಿಜೆಪಿ ದೂರು
ಅಮಿತ್ ಶಾ ವಿರುದ್ಧ ಅಪಪ್ರಚಾರ: ಆರೋಪ

ಬೆಂಗಳೂರು, ಸೆ.20: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪ ಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಬುಧವಾರ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದ ನಿಯೋಗ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರಿಗೆ ದೂರು ನೀಡಿ, ಕಿಡಿಗೇಡಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ‘mybengalooru.com' ಹೆಸರಿನ ವೆಬ್‌ಸೈಟ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನವಂಬರ್ 1ರಂದು ಕನ್ನಡ ಧ್ವಜ ಬದಲು ಪಕ್ಷದ ಧ್ವಜ ಹಾರಿಸುವಂತೆ ಕರೆ ನೀಡಿದ್ದಾರೆ ಎನ್ನುವ ಸುಳ್ಳು ಸುದ್ದಿಯನ್ನು ಹರಿಬಿಡಲಾಗಿದೆ. ಹೀಗಾಗಿ, ಈ ವೆಬ್‌ಸೈಟ್ ವಿರುದ್ಧ ಮೊಕದ್ದಮೆ ದಾಖಲಿಸುವ ಜೊತೆಗೆ ತನಿಖೆ ನಡೆಸುವಂತೆ ಆಯುಕ್ತರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಅದೇ ರೀತಿ, ‘ನಮ್ಮ ನೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಹೆಸರಿನ ಫೇಸ್‌ಬುಕ್ ಪುಟದಲ್ಲೂ ಅಮಿತ್ ಶಾ ಕುರಿತ ಸುಳ್ಳು ಸುದ್ದಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಎಂದ ಅವರು, ಮುಖ್ಯಮಂತ್ರಿಗಳ ಆಪ್ತರೇ ಈ ಮೇಲಿನ ವೆಬ್‌ಸೈಟ್ ಆರಂಭಿಸಿದ್ದಾರೆ ಎನ್ನುವ ಅನುಮಾನ ಇದೆ ಎಂದು ಆರೋಪಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಉದ್ದೇಶ ಪೂರ್ವಕವಾಗಿ ಬಿಜೆಪಿ, ಅಮಿತ್ ಶಾ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಹೀಗಾಗಿ, ಸೈಬರ್ ಕಾಯ್ದೆ ಅಡಿ ಅನ್ವಯ ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ತನಿಖೆ ಆರಂಭಿಸುವುದಾಗಿ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿರುವುದಾಗಿ ಸಿ.ಟಿ.ರವಿ ಹೇಳಿದರು.







