ಬಿಜೆಪಿ ಗಡುವಿಗೆ ಕಿಮ್ಮತ್ತಿಲ್ಲ: ದಿನೇಶ್ ಗುಂಡೂರಾವ್
.jpg)
ಬೆಂಗಳೂರು, ಸೆ.20: ಸಚಿವ ಜಾರ್ಜ್‌ರ ರಾಜೀನಾಮಗೆ ಆಗ್ರಹಿಸಿ ಬಿಜೆಪಿ ನಾಯಕರು ಸೆ.26ರವರೆಗೂ ನೀಡಿರುವ ಗಡುವಿಗೆ ಕಾಂಗ್ರೆಸ್ ಪಕ್ಷ ಯಾವುದೇ ಕಿಮ್ಮತ್ತು ನೀಡಲ್ಲ. ಬಿಜೆಪಿಯ ಅಹೋರಾತ್ರಿ ಧರಣಿ ಎಚ್ಚರಿಕೆಗೂ ನಾವು ಹೆದುರುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬುಧವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆಯಲ್ಲಿ ಸಚಿವ ಜಾರ್ಜ್‌ರ ಕೈವಾಡವಿದೆ ಎಂಬ ಆರೋಪ ಆಧಾರ ರಹಿತ. ಜಾರ್ಜ್‌ರ ಮೇಲೆ ಬಿಜೆಪಿಯವರಿಗೆ ವಿಪರೀತ ಪ್ರೀತಿ ಇರುವುದರಿಂದ ಬಿಜೆಪಿ ನಾಯಕರು ಪದೇ ಪದೇ ಆರೋಪ ಮಾಡುತ್ತಿದ್ದಾರೆ. ಬಿಟ್ಟಿ ಪ್ರಚಾರಕ್ಕಾಗಿ ಜಾರ್ಜ್‌ರ ಹಿಂದೆ ಬಿದ್ದಿದ್ದಾರೆ ಎಂದು ಲೇವಡಿ ಮಾಡಿದರು.
ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆಯಲ್ಲಿ ಸಚಿವ ಜಾರ್ಜ್ ಅವರ ಕೈವಾಡ ಇರುವ ಕುರಿತು ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ಅಲ್ಲದೆ ನ್ಯಾಯಾಲಯದ ಮುಖಾಂತರ ಹಾಗೂ ಯಾವುದೇ ತನಿಖೆ ತಂಡದಿಂದ ತನಿಖೆ ನಡೆಸಲಿ. ಯಾವುದೇ ತನಿಖೆಗೂ ಸಚಿವ ಜಾರ್ಜ್ ಮತ್ತು ಪಕ್ಷ ಸಿದ್ಧವಿದೆ ಎಂದು ಸವಾಲು ಹಾಕಿದರು.
ಬಿಜೆಪಿಯ ಯಾವ ಯಾವ ನಾಯಕರ ಮೇಲೆ ಮೇಲೆ ಎಫ್‌ಐಆರ್ ದಾಖಲಾಗಿವೆ ಎಂಬುವುದು ಜನರಿಗೆ ಗೊತ್ತಿದೆ. ಬಾವಿ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಎಫ್‌ಐಆರ್ ಸೇರಿದಂತೆ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ತಮ್ಮಲ್ಲಿರುವ ಹುಳಕನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ನಾಯಕರತ್ತ ಬಿಜೆಪಿಯವರು ಬೊಟ್ಟು ತೋರಿಸುತ್ತಿದ್ದಾರೆ ಎಂದು ಛೇಡಿಸಿದರು.
ಹಿಟ್ ಆ್ಯಂಡ್ ರನ್ ಕೇಸ್: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಯಾವುದೇ ಪುರಾವೆಗಳಿಲ್ಲದೆ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡುತ್ತಿದ್ದಾರೆ. ಸರಕಾರದ ಭ್ರಷ್ಟಾಚಾರದ ಕುರಿತು ದಾಖಲೆ ಬಿಡುಗಡೆ ಮಾಡುತ್ತೇನೆ ಎಂಬ ಹೇಳೀಕೆಯಿಂದ ಪದೇ ಪದೇ ನುಣಚಿಕೊಳ್ಳುತ್ತಿದ್ದಾರೆ. ಅವರ ಬಳಿ ಆಧಾರಗಳಿದ್ದರೆ ತನಿಖಾ ತಂಡಗಳಿಗೆ ಮೊರೆ ಹೋಗಲಿ. ಕೇಂದ್ರದಲ್ಲೂ ಅವರದೇ ಸರಕಾರವಿದೆ. ಅದು ಬಿಟ್ಟು ಸುಖಾ ಸುಮ್ಮನೆ ಬೀದಿಯಲ್ಲಿ ಬಾಯಿ ಬಡ್ಕೋತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಯಾವುದೇ ಹುನ್ನಾರ ನಡೆಸಿದರು, ಅದನ್ನು ಸಮರ್ಥವಾಗಿ ಎದುರಿಸವ ಶಕ್ತಿ ಇದೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಪ್ರತಿಪಾದಿಸಿದರು.







