ಮುಂಬೈ ಮಳೆ: ಕೆಸರಲ್ಲಿ ಸಿಲುಕಿದ ಸ್ಪೈಸ್‌ಜೆಟ್ ವಿಮಾನ

ಮುಂಬೈ, ಸೆ.20: ಮುಂಬೈಯಲ್ಲಿ ಮಂಗಳವಾರ ಮಧ್ಯಾಹ್ನದಿಂದ ಸುರಿಯುತ್ತಿರುವ ಮುಸಲಧಾರೆ ಮಳೆಯ ಕಾರಣ ಒದ್ದೆಯಾಗಿದ್ದ ರನ್‌ವೇಯಲ್ಲಿ ಜಾರಿದ ಸ್ಪೈಸ್‌ಜೆಟ್ ವಿಮಾನವೊಂದು ಕೆಸರಲ್ಲಿ ಸಿಲುಕಿಕೊಂಡ ಘಟನೆ ವರದಿಯಾಗಿದೆ.
ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬೆಳಗ್ಗೆ 10 ಗಂಟೆ ವೇಳೆಗೆ ವಾರಣಸಿಯಿಂದ ಬರುತ್ತಿದ್ದ ವಿಮಾನವು ರನ್‌ವೇ ಸ್ಪರ್ಷಿಸುತ್ತಿದ್ದ ಸಂದರ್ಭ ಜಾರಿಕೊಂಡ ಕಾರಣ ರನ್‌ವೇಯ ಬದಿಗೆ ಸರಿದು ಕೆಸರಲ್ಲಿ ಸಿಲುಕಿಕೊಂಡಿದೆ. ಇದರಿಂದ ವಿಮಾನನಿಲ್ದಾಣದಲ್ಲಿ ವಿಮಾನಸಂಚಾರ ಕಾರ್ಯಾಚರಣೆ ರದ್ದುಗೊಳಿಸಲಾಗಿದ್ದು ವಿಮಾನಗಳನ್ನು ಗೋವ, ಬೆಂಗಳೂರು ಹಾಗೂ ಹೈದರಾಬಾದ್‌ಗೆ ದಿಕ್ಕು ಬದಲಿಸಲಾಗಿದೆ.
ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಿಮಾನದಲ್ಲಿದ್ದ 183 ಪ್ರಯಾಣಿಕರನ್ನು ಸುರಕ್ಷಿತವಾಗಿ ನಿಲ್ದಾಣದ ಕೊಠಡಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಯಾಣಿಕರನ್ನು ಟರ್ಮಿನಲ್ 1ರಿಂದ ಟರ್ಮಿನಲ್ 2ಕ್ಕೆ ಸ್ಥಳಾಂತರಿಸಲಾಗಿದ್ದು ಸೂಕ್ತ ಆಸನದ ವ್ಯವಸ್ಥೆ ಹಾಗೂ ರಿಯಾಯಿತಿ ದರದಲ್ಲಿ ಖಾದ್ಯ ವಸ್ತುಗಳನ್ನು ಪೂರೈಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆಯ ಕಾರಣ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 7 ಗಂಟೆಯಿಂದ 7:30ರವರೆಗೆ ವಿಮಾನ ಸಂಚಾರ ರದ್ದುಗೊಳಿಸಲಾಗಿತ್ತು. ಸ್ಪೈಸ್‌ಜೆಟ್ ವಿಮಾನ ಕೆಸರಲ್ಲಿ ಸಿಲುಕಿಕೊಂಡ ಕಾರಣ ಬೆಳಗ್ಗೆ 10:30ರ ಬಳಿಕ ಮತ್ತೆ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಗಂಟೆಗೆ ಸುಮಾರು 50ರಷ್ಟು ವಿಮಾನಗಳ ಸಂಚಾರ(ಆಗಮನ-ನಿರ್ಗಮನ) ಇರುತ್ತದೆ.







