ವಿಜಯಪುರ: ಮಹಿಳೆಯ ಮೇಲೆ ಗುಂಡಿಕ್ಕಿ ದಾಳಿ
ವಿಜಯಪುರ, ಸೆ.21: ಇಲ್ಲಿನ ಶಾಸ್ತ್ರೀ ಕಾಲನಿಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಬುಧವಾರ ನಡೆದಿದ್ದು, ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗಾಂಧಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಾಸ್ತ್ರಿ ನಗರದ ನಿವಾಸಿ ಮುಮ್ತಾಝ್ ಖಾನಂ ಎಂಬ ಮಹಿಳೆಯ ಕೈಗೆ ಗುಂಡು ತಗುಲಿ ಗಂಭೀರ ಸ್ವರೂಪವಾಗಿ ಗಾಯಗೊಂಡಿದ್ದಾರೆ. ಸಮೀರ್ ಪಠಾಣ ಎಂಬಾತ ಗುಂಡು ಹಾರಿಸಿದ ಆರೋಪಿ ಎಂದು ಹೇಳಲಾಗಿದೆ.
ಮನೆ ಎದುರು ಬಂದ ಆರೋಪಿ ಸಮೀರ್ ಏಕಾಏಕಿ ಮುಮ್ತಾಝ್ ಮೇಲೆ ಗುಂಡು ಹಾರಿಸಿದ್ದು, ಆಕೆ ಕೂಡಲೇ ಮನೆಯ ಒಳಗೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಗಾಯಗೊಂಡಿರುವ ಮುಮ್ತಾಝ್ ಖಾನಂ ಎಂಬವರ ಪುತ್ರ ಸಲ್ಮಾನ್ ಖಾನ್, ಆರೋಪಿ ಸಮೀರ್ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಹೀಗಾಗಿ ಮದ್ಯದ ಅಮಲಿನಲ್ಲಿ ಸಮೀರ್ ಸಲ್ಮಾನ್ ತಾಯಿ ಮುಮ್ತಾಝ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಗಾಂಧಿ ಚೌಕ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಿಸ್ತೂಲ್‌ನಿಂದ ಗುಂಡಿನ ದಾಳಿ ನಡೆಸಿದ ಆರೋಪಿ ಸಮೀರ್ ಪಠಾಣ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.







